ADVERTISEMENT

ಗೋಪಾಲ ಜೋಷಿ ಪ್ರಕರಣ | ಟಿಕೆಟ್‌ಗಾಗಿ ಸುಲಿಗೆ ಆರೋಪ: ದಾಖಲೆ ಸಲ್ಲಿಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 23:48 IST
Last Updated 24 ಅಕ್ಟೋಬರ್ 2024, 23:48 IST
ಗೇಟ್‌ ತೆರವು ಹೈಕೋರ್ಟ್ ತಾಕೀತು
ಗೇಟ್‌ ತೆರವು ಹೈಕೋರ್ಟ್ ತಾಕೀತು   

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಆಮಿಷವೊಡ್ಡಿ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ್‌ ಫೂಲ್‌ ಸಿಂಗ್‌ ಚವ್ಹಾಣ್‌ ಅವರಿಂದ ₹2 ಕೋಟಿ ಸುಲಿಗೆ ಮಾಡಿದ್ದಾರೆ ಎಂಬ ಆರೋಪದಡಿ ಬಂಧನದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅಣ್ಣ ಗೋಪಾಲ ಜೋಶಿ ಮತ್ತಿತರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಹೈಕೋರ್ಟ್‌, ರಾಜ್ಯ ಪ್ರಾಸಿಕ್ಯೂಷನ್‌ಗೆ ಆದೇಶಿಸಿದೆ.

ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಗೋಪಾಲ ಜೋಶಿ ಸೇರಿ ಇತರರು ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್ ಅವರು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದರು.

‘ಈ ಪ್ರಕರಣ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ (ಪಿಎಂಎಲ್‌ಎ) ಆರೋಪಕ್ಕೆ ಸಂಬಂಧಿಸಿದೆ. ಕಳೆದ ಮಾರ್ಚ್‌, ಏಪ್ರಿಲ್‌, ಮೇ ಹಾಗೂ ಆಗಸ್ಟ್‌ನಲ್ಲಿ ಘಟನಾವಳಿ ನಡೆದಿವೆ ಎಂದು ಆಪಾದಿಸಲಾಗಿದೆ. ಆದರೆ, ಇದೇ 17ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಗೋಪಾಲ ಜೋಶಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು ಇವರಲ್ಲಿ ಇಬ್ಬರನ್ನು ಪೊಲೀಸ್‌ ಕಸ್ಟಡಿಗೆ, ಇನ್ನಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂಬ ಅಂಶಗಳನ್ನು ರವಿಶಂಕರ್ ನ್ಯಾಯಪೀಠಕ್ಕೆ ವಿವರಿಸಿದರು.

ADVERTISEMENT

ಈ ವಿವರಣೆಗೆ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಲಾದ ಈ ವಿಚಾರವು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಕಚೇರಿಯಲ್ಲೇ ನಡೆದಿದೆ. ಈ ಕುರಿತು ತನಿಖೆ ನಡೆಯುತ್ತಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ‘ಇದೇ 28ರಂದು ಪ್ರಕರಣದ ವಿಚಾರಣೆ ನಡೆಸಲಾಗುವುದು. ಅಂದು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿ’ ಎಂದು ಪ್ರಾಸಿಕ್ಯೂಷನ್‌ಗೆ ತಾಕೀತು ಮಾಡಿದರು.

ಗೋಪಾಲ ಜೋಶಿ ಮತ್ತು ಅವರ ಪುತ್ರ ಅಜಯ್‌ ಜೋಶಿ ಅವರನ್ನು ನ್ಯಾಯಾಲಯ 10 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿದ್ದರೆ, ಅಥಣಿಯ ಎಂಜಿನಿಯರ್‌ ಸೋಮಶೇಖರ್‌ ನಾಯಕ್‌ ಹಾಗೂ ಬಸವೇಶ್ವರ ನಗರದ ನಿವಾಸಿ ವಿಜಯಕುಮಾರಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀತಾ ಚವ್ಹಾಣ್‌ ನೀಡಿರುವ ದೂರಿನ ಅನ್ವಯ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.