ವಿಧಾನಸಭೆ: ಲೋಕಸಭೆ ಒಳಗೆ ನುಗ್ಗಿ ದಾಳಿಗೆ ಯತ್ನಿಸಿದ ಪ್ರಕರಣದಲ್ಲಿ ಬಿಜೆಪಿ ಸಂಸದ ಪ್ರತಾಪ ಸಿಂಹ ಹೆಸರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಸ್ತಾಪಿಸಿದ್ದು, ಕೋಲಾಹಲಕ್ಕೆ ಕಾರಣವಾಯಿತು.
ವಿಷಯ ಪ್ರಸ್ತಾಪಿಸಿದ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು, ಸಂಸತ್‌ನಲ್ಲಿ ಭದ್ರತಾ ಲೋಪ ಆಗಿದ್ದು ಶಾಸಕರಿಗೆ, ದೇಶದ ಜನರಿಗೆ ಆತಂಕ ತಂದಿದ್ದು, ಕಳವಳಕ್ಕೆ ಕಾರಣವಾಗಿದೆ. ಸರ್ವರೂ ಜಾಗೃತರಾಗಿ ಇರಬೇಕಾದ ಸಂದರ್ಭ ಇದಾಗಿದೆ. ಭದ್ರತಾ ವಿಷಯದಲ್ಲಿ ರಾಜಿ ಸಲ್ಲದು. ಭಯ ಹುಟ್ಟಿಸುವ ಶಕ್ತಿಗಳನ್ನು ಎಲ್ಲರೂ ಸೇರಿ ಖಂಡಿಸಬೇಕಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಧ್ವನಿಗೂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಮುಖ್ಯಮಂತ್ರಿ, ಸಚಿವರು ಎಂದು ಹೇಳಿದರೂ ತಪಾಸಣೆ ನಡೆಸದೇ ಒಳಗೆ ಬಿಡುವುದಿಲ್ಲ. ಒಳಗೆ ಬರುವವರು ಕೆಟ್ಟವರು, ಒಳ್ಳೆಯವರು, ಭಯೋತ್ಪಾದಕರೂ ಇರಬಹುದು. ಭದ್ರತಾ ಲೋಪ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇಂತಹ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದರು.
ಮತ್ತೆ ಮಾತನಾಡಿದ ಶಿವಕುಮಾರ್, ‘ಪ್ರತಾಪ ಸಿಂಹ ಬುದ್ಧಿವಂತ. ಅವರ ಹೆಸರು ಪ್ರಸ್ತಾಪಿಸುವುದು ನನಗೆ ಇಷ್ಟವಿಲ್ಲ. ನಮ್ಮ ರಾಜ್ಯದ ಸಂಸದರಾಗಿದ್ದು, ಅವರೇ ಪಾಸ್ ಕೊಟ್ಟಿರುವುದರಿಂದ ಹೇಳಲೇಬೇಕಾಗಿದೆ’ ಎಂದರು.
ಕಾಂಗ್ರೆಸ್‌ನ ನಯನಾ ಮೋಟಮ್ಮ, ’ಬಿಜೆಪಿ ಸಂಸದರು ಬಿಟ್ಟು ಬೇರೆಯವರು ಪಾಸ್ ಕೊಟ್ಟಿದ್ದರೆ ಇಷ್ಟೊತ್ತಿಗೆ ಪರಿಸ್ಥಿತಿ ಹೇಗೆ ಇರ್ತಿತ್ತು. ನೀವೂ ಏರಿದ ಧ್ವನಿಯಲ್ಲಿ ಖಂಡಿಸಿ’ ಎಂದು ಬಿಜೆಪಿಯವರನ್ನು ಒತ್ತಾಯಿಸಿದರು.
‘ನಾವೂ ಖಂಡನೆ ಮಾಡಿದ್ದೇವೆ. ಶಿವಕುಮಾರ್ ತಮ್ಮ ಸಂಸದರಾಗಿದ್ದು ಅವರೇ ಪಾಸ್ ಕೊಟ್ಟಿದ್ದರೆ ಆಗ ಏನಾಗುತ್ತಿತ್ತು? ರಾಜಕಾರಣ ಬೇಡ’ ಎಂದು ಅಶೋಕ ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ಸದಸ್ಯರು, ‘ನಮ್ಮ ಪಕ್ಷದವರು ಪಾಸ್ ಕೊಟ್ಟಿದ್ದರೆ ಇಷ್ಟೊತ್ತಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟಿ, ಏನೇನೋ ಮಾಡಿಬಿಡುತ್ತಿದ್ದೀರಿ. ಪ್ರಕರಣ ಖಂಡಿಸಿ ಧರಣಿ ಮಾಡಿ. ಪ್ರತಾಪ ಸಿಂಹ ಧೋರಣೆ ಖಂಡಿಸಿ’ ಎಂದು ಆಗ್ರಹಿಸಿದರು. ಕಲಾಪ ಗದ್ದಲದ ಗೂಡಾಯಿತು.
ಈ ವೇಳೆ, ಅಶೋಕ ಹೇಳಿದ ಮಾತೊಂದು ಸಚಿವರು, ಕಾಂಗ್ರೆಸ್‌ನವರನ್ನು ಕೆರಳಿಸಿತು. ಸಿಟ್ಟಾದ ಎಚ್.ಕೆ. ಪಾಟೀಲರು, ‘ಅನಾರೋಗ್ಯಕರ ರಾಜಕೀಯ ಮಾಡ್ತಾ ಇದ್ದೀರಿ. ನಾವೇನಾದರೂ ಪ್ರತಾಪ ಸಿಂಹ ರಾಜೀನಾಮೆ ಕೇಳಿದ್ದೇವೆಯೇ? ನೀವಾದರೆ ಏನು ಮಾಡುತ್ತಿದ್ದೀರಿ’ ಎಂದು ಅಬ್ಬರಿಸಿದರು.
‘ಯಾರ‍್ಯಾರಿಗೋ ಪಾಸ್ ಕೊಟ್ಟಿರುತ್ತಾರೆ. ಅದಕ್ಕೆ ಸಂಸದರು ಹೇಗೆ ಹೊಣೆ? ಭದ್ರತಾ ವೈಫಲ್ಯ ಇರಬಹುದು’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಹೇಳಿದರು. ಇದನ್ನು ಉಲ್ಲೇಖಿಸಿದ, ಸಚಿವ ಪ್ರಿಯಾಂಕ್, ‘ಕೇಂದ್ರ ಗೃಹ ಸಚಿವರ ಲೋಪವೇ, ಅವರು ಸಮರ್ಥರಾ’ ಎಂದು ಕೆಣಕಿದರು.
ಗದ್ದಲ ಜೋರಾಗುತ್ತಿದ್ದಂತೆ ಕಲಾಪ ಮುಂದೂಡಿದ ಸಭಾಧ್ಯಕ್ಷ ಯು.ಟಿ. ಖಾದರ್, ಸಂಧಾನ ಸಭೆ ನಡೆಸಿದರು.
ಬಳಿಕ ಕಲಾಪ ಆರಂಭವಾದಾಗ ಮಾತನಾಡಿದ ಸಭಾಧ್ಯಕ್ಷರು, ‘ಎಲ್ಲರಿಗೂ ಎಚ್ಚರಿಕೆ ಕೊಡುವ ಘಟನೆ ಇದಾಗಿದೆ. ತಪ್ಪಿತಸ್ಥರನ್ನು ಹುಡುಕಿ ಶಿಕ್ಷಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ. ಯಾರೋ ಪಾಸ್ ಕೇಳುತ್ತಾರೆ, ಮಾನವೀಯತೆ ಮೇಲೆ ಪಾಸ್ ಕೊಡುತ್ತೇವೆ. ಇನ್ನುಮುಂದೆ ಯಾರೊಬ್ಬರೂ ಅಪರಿಚಿತರಿಗೆ ಪಾಸ್ ಕೊಡಬೇಡಿ. ಆಪ್ತ ಸಹಾಯಕರು ಶಾಸಕರಿಗಿಂತ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ಒಳಗೆ ಬಿಡುವುದಿಲ್ಲವೆಂದ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಇದು ತಪ್ಪಬೇಕು. ನಾವೆಲ್ಲ ಎಚ್ಚರವಹಿಸೋಣ. ಲೋಕಸಭೆಯಲ್ಲಿ ನಡೆದ ಘಟನೆಯನ್ನು ಸರ್ವಾನುಮತದಿಂದ ಖಂಡಿಸೋಣ’ ಎಂದು ಹೇಳಿ ವಿಷಯವನ್ನು ಕೊನೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.