ADVERTISEMENT

ಲೋಕಾಯುಕ್ತ ದಾಳಿ | ಅಕ್ರಮ ಆಸ್ತಿ: ₹22.5 ಕೋಟಿ ಪತ್ತೆ

ಎಂಟು ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 0:34 IST
Last Updated 13 ನವೆಂಬರ್ 2024, 0:34 IST
   

ಬೆಂಗಳೂರು: ವಿವಿಧ ಇಲಾಖೆಗಳ ಎಂಟು ಅಧಿಕಾರಿಗಳಿಗೆ ಸೇರಿದ 37 ಸ್ಥಳಗಳ ಮೇಲೆ ಮಂಗಳವಾರ ಏಕಕಾಲಕ್ಕೆ ದಾಳಿಮಾಡಿ ಶೋಧ ನಡೆಸಿದ ಲೋಕಾಯುಕ್ತ ಪೊಲೀಸರು, ₹22.50 ಕೋಟಿ ಮೌಲ್ಯದ ಅಕ್ರಮ ಆಸ್ತಿಗಳನ್ನು ಪತ್ತೆಮಾಡಿದ್ದಾರೆ.

ಬೆಳಗಾವಿ, ಹಾವೇರಿ, ದಾವಣಗೆರೆ, ಬೀದರ್‌, ಮೈಸೂರು, ರಾಮನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆದಿದೆ. ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಒಬ್ಬ ನಿವೃತ್ತರೂ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ಆರೋಪಿಗಳ ಬಳಿ ₹17.84 ಕೋಟಿ ಮೌಲ್ಯದ ಸ್ಥಿರಾಸ್ತಿಗಳು, ₹66.70 ಲಕ್ಷ ನಗದು, ₹1.66 ಕೋಟಿ ಮೌಲ್ಯದ ಚಿನ್ನಾಭರಣ, ₹1.44 ಕೋಟಿ ಮೌಲ್ಯದ ವಾಹನಗಳು, ₹88.26 ಲಕ್ಷ ಮೌಲ್ಯದ ಇತರ ಸ್ವತ್ತುಗಳನ್ನು ಪತ್ತೆಮಾಡಲಾಗಿದೆ ಎಂದು ಲೋಕಾಯುಕ್ತದ ಪೊಲೀಸ್‌ ವಿಭಾಗ ತಿಳಿಸಿದೆ.

ADVERTISEMENT

ಕೆಎಸ್‌ಆರ್‌ಟಿಸಿಯ ರಾಮನಗರ ಘಟಕದಲ್ಲಿ ವಿಭಾಗೀಯ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿ ಇತ್ತೀಚೆಗೆ ನಿವೃತ್ತರಾಗಿರುವ ಪ್ರಕಾಶ್ ವಿ. ಬಳಿ ಅತ್ಯಧಿಕ ₹4.26 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಮಾಡಲಾಗಿದೆ. ಅವರು, ಆರು ಮನೆಗಳು, ಎಂಟು ನಿವೇಶನ, 6 ಎಕರೆ ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದೆ.

ಬೀದರ್‌ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ರವೀಂದ್ರ ಕುಮಾರ್‌ ಬಳಿ ₹4.22 ಕೋಟಿ ಅಕ್ರಮ ಆಸ್ತಿ ಇರುವುದು ತನಿಖೆಯಲ್ಲಿ ಬಯಲಾಗಿದೆ. ಅವರು ಐದು ಮನೆ, ಏಳು ನಿವೇಶನ, 10 ಎಕರೆ ಕೃಷಿ ಜಮೀನಿನ ಒಡೆತನ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ರಿಯಲ್‌ ಎಸ್ಟೇಟ್‌ ವಹಿವಾಟು: ಮೈಸೂರು ಮಹಾನಗರ ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗೇಶ್‌ ಡಿ. ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲೂ ಸಕ್ರಿಯವಾಗಿರುವುದು ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಪತ್ತೆಯಾಗಿದೆ. ಪಾಲಿಕೆ ವಲಯ ಆಯುಕ್ತರ ಹುದ್ದೆಯನ್ನೂ ಹೊಂದಿರುವ ಈ ಅಧಿಕಾರಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಡಾಲರ್ಸ್‌ ಕಾಲೊನಿಯಲ್ಲಿ ಐದು ಅಂತಸ್ತಿನ ಅಪಾರ್ಟ್‌ಮೆಂಟ್‌ ನಿರ್ಮಿಸುತ್ತಿರುವುದನ್ನು ತನಿಖಾ ತಂಡ ಪತ್ತೆಮಾಡಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಕೋರಮಂಗಲ ಕಚೇರಿಯ ಸಹಾಯಕ ಆಯುಕ್ತ ವೆಂಕಟೇಶ್ ಎಸ್. ಮುಜುಮ್ದಾರ್ ಬಳಿ ಎರಡು ಮನೆ, ಒಂದು ಎಲ್‌ಪಿಜಿ ಗ್ಯಾಸ್ ಗೋದಾಮು ಇವೆ. ₹39.31 ಲಕ್ಷ ಮೌಲ್ಯದ ಚಿನ್ನಾಭರಣಗಳು ಇವರ ಮನೆಯಲ್ಲಿ ಸಿಕ್ಕಿವೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ದಾವಣೆಗೆರೆ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಕಮಲ್‌ ರಾಜ್‌ ಬಳಿ ಎರಡು ಮನೆ, ಆರು ನಿವೇಶನ, 1 ಎಕರೆ ಕೃಷಿ ಜಮೀನು,  ₹15.79 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿವೆ.

ಎರಡು ತಿಂಗಳ ಹಿಂದೆ ₹1.10 ಕೋಟಿ ನಗದನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ನಿಪ್ಪಾಣಿ ತಾಲ್ಲೂಕಿನ ಬೋರೆಗಾವ್‌ ಗ್ರಾಮದ ಗ್ರಾಮ ಆಡಳಿತಾಧಿಕಾರಿ ವಿಠಲ್‌ ಶಿವಪ್ಪ ಢವಳೇಶ್ವರ್‌ ಮೇಲೂ ದಾಳಿ ನಡೆದಿದೆ.

ಪಾಲಿಕೆ ವಲಯ ಆಯುಕ್ತ ಅಪಾರ್ಟ್‌ಮೆಂಟ್ ಮಾಲೀಕ

ಮೈಸೂರು: ಇಲ್ಲಿನ ಮಹಾನಗರ ಪಾಲಿಕೆ ವಲಯ ಕಚೇರಿ ಆಯುಕ್ತ ನಾಗೇಶ್.ಡಿ ಅವರು, ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಡಾಲರ್ಸ್‌ ಕಾಲೊನಿಯಲ್ಲಿ ನಿರ್ಮಿಸುತ್ತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಐದಂತಸ್ತಿನ ಕಟ್ಟಡವು ಲೋಕಾಯುಕ್ತ ಅಧಿಕಾರಿಗಳ ಹುಬ್ಬೇರುವಂತೆ ಮಾಡಿತು.

ಚನ್ನಪಟ್ಟಣ ನಗರಸಭೆ ಪೌರಾಯುಕ್ತರಾಗಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ ಬಳಿಕ ಮೈಸೂರಿಗೆ ವರ್ಗಾವಣೆಗೊಂಡಿದ್ದ ಅವರಿಗೆ ಸಂಬಂಧಿಸಿದ ಜಾಗಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ಮಾಡಿದರು.

ಶ್ರೀರಂಗಪಟ್ಟಣದಲ್ಲಿರುವ ಬಾಡಿಗೆ ಮನೆ, ಬೆಂಗಳೂರಿನ ನಿವಾಸ, ಮೈಸೂರಿನ ಮೇಟಗಳ್ಳಿ ಬಸವನಗುಡಿ ವೃತ್ತದ ಬಳಿ ಇರುವ ವಲಯ 5ರ ಕಚೇರಿಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು
ವಶಪಡಿಸಿಕೊಂಡಿದ್ದಾರೆ.

₹9 ಲಕ್ಷದ ಗಂಟು ಹೊರಗೆ ಎಸೆದ ಎಇಇ

ಹಾವೇರಿ: ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಕಾಶಿನಾಥ್ ಭಜಂತ್ರಿ ಅವರ ಮನೆ ಮೇಲೆ ಮಂಗಳವಾರ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು, ಬಟ್ಟೆಯಲ್ಲಿ ಗಂಟು ಕಟ್ಟಿ ಮನೆಯಿಂದ ಹೊರಗೆ ಎಸೆದಿದ್ದ ₹9 ಲಕ್ಷ ಸೇರಿ ಸುಮಾರು ₹14.70 ಲಕ್ಷ ನಗದನ್ನು ವಶ‍‍ಡಿಸಿ ಕೊಂಡಿದ್ದಾರೆ.

‘ಬೆಳಿಗ್ಗೆ 6ರ ಸುಮಾರಿಗೆ ಮನೆಯ ಬಾಗಿಲು ಬಡಿದ ಲೋಕಾಯುಕ್ತ ಪೊಲೀಸರನ್ನು ಕಂಡ ಕೂಡಲೇ ಕಾಶಿನಾಥ್ ಹೆದರಿಕೊಂಡರು. ತಕ್ಷಣವೇ ಮನೆಯಲ್ಲಿದ್ದ ₹9 ಲಕ್ಷ ನಗದನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಶೌಚಾಲಯದ ಕಿಟಕಿ ಮೂಲಕ ಹೊರಗೆ ಎಸೆದರು. ಮನೆ ಯೊಳಗೆ ಅಲ್ಲದೇ ಸುತ್ತಮುತ್ತ ತಪಾಸಣೆ ಮಾಡಿದಾಗ, ಬಟ್ಟೆಯಲ್ಲಿ ಗಂಟು ಕಟ್ಟಿದ್ದ ₹9 ಲಕ್ಷ ಸಿಕ್ಕಿತು. ಹಾಸಿಗೆ ಮೇಲೆ ₹2 ಲಕ್ಷ, ಮನೆಯ ಇತರೆ ಸ್ಥಳಗಳಲ್ಲಿ ₹3.70 ಲಕ್ಷ ಸಿಕ್ಕಿತು’ ಎಂದು ಪೊಲೀಸರು ತಿಳಿಸಿದರು.

‘ಇಲಾಖೆಯ ಪ್ರಭಾರಿ ಕಾರ್ಯ ನಿರ್ವಾಹಕ ಎಂಜಿನಿಯರ್ ಸಹ ಆಗಿರುವ ಕಾಶಿನಾಥ್ ಅವರ 6 ಮನೆಗಳು, ಕಚೇರಿ ಮತ್ತು ಅಡಿಕೆ ತೋಟದ ಮನೆ ಮೇಲೆ ದಾಳಿ ನಡೆದಿದೆ’ ಎಂದು ದಾವಣಗೆರೆಯ ಲೋಕಾಯುಕ್ತ ಪೊಲೀಸ್ ಎಸ್ಪಿ ಎಂ.ಎಸ್. ಕೌಲಾಪುರೆ ತಿಳಿಸಿದರು.

ಉಪನಿರ್ದೇಶಕ ನಾಪತ್ತೆ: ಬಾಗಿಲು ಕಾದ ಲೋಕಾಯುಕ್ತ ಪೊಲೀಸರು

ಹಾವೇರಿ: ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ಆಲದರ್ತಿ ಮನೆಗೆ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಬಂದ ಲೋಕಾಯಕ್ತ ಪೊಲೀಸರು, ಆಲದರ್ತಿ ನಾಪತ್ತೆ ಆಗಿದ್ದರಿಂದ ಬೆಳಿಗ್ಗೆಯಿಂದ ರಾತ್ರಿಯವರೆಗೂ ಬೀಗ ಹಾಕಿದ್ದ ಮನೆಯ ಬಾಗಿಲು ಕಾಯುವಂತಾಯಿತು.

ಶ್ರೀನಿವಾಸ್ ಆಲದರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಹಾವೇರಿ ಲೋಕಾಯುಕ್ತ ಪೊಲೀಸರು, ರಾಣೆಬೆನ್ನೂರಿನಲ್ಲಿ ಇರುವ ಮನೆಗೆ ಬಂದಿದ್ದರು. ಶ್ರೀನಿವಾಸ್ ಮನೆಯಲ್ಲಿ ಯಾರೂ ಇಲ್ಲ. ಬೀಗ ಹಾಕಿತ್ತು. ಶ್ರೀನಿವಾಸ್ ಅವರು ಸ್ವಂತ ಊರಾದ ಯಾದಗಿರಿಗೆ ಹೋದ ಮಾಹಿತಿ ಲಭ್ಯವಾಯಿತು. ಅವರು ವಾಪಸು ಬರುವ ನಿರೀಕ್ಷೆಯಲ್ಲಿ ಸ್ಥಳೀಯ ಪೊಲೀಸರ ಜೊತೆಯಲ್ಲಿ ಲೋಕಾಯುಕ್ತ ಪೊಲೀಸರು ಮನೆ ಎದುರು ಕಾದರು. ಊಟ ಹಾಗೂ ತಿಂಡಿಯನ್ನೂ ಮನೆ ಹೊರಗಡೆಯೇ ತಿಂದರು.

‘ಶ್ರೀನಿವಾಸ್ ಅವರ ತಾಯಿ ಯಾದಗಿರಿಯಲ್ಲಿ ತೀರಿಕೊಂಡಿದ್ದು, ಅದಕ್ಕಾಗಿ ಅವರು ಯಾದಗಿರಿಗೆ ಹೋಗಿರುವುದು ಗೊತ್ತಾಗಿದೆ. ಅವರ ಬರುವಿಕೆಗಾಗಿ ಮನೆ ಎದುರು ಕಾದು ಕೂತಿದ್ದೇವೆ. ಅವರು ಬಂದ ಬಳಿಕ ಮನೆ ಬಾಗಿಲು ತೆರೆಸಿ ಪರಿಶೀಲಿಸಲಾಗುವುದು’ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.

ಆಲದರ್ತಿ ಅವರ ಕಾರು ಚಾಲಕ ಸಿದ್ದೋಜಿ ಸೂರ್ಯವಂಶಿ, ಕಚೇರಿ ನೌಕರರಾದ ಅನಿಲ ಸುರ್ವೆ ಹಾಗೂ ಜ್ಯೋತಿ ಶಿಗ್ಲಿ ಮನೆ ಮೇಲೂ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿ, ಹಲವು ವಸ್ತುಗಳನ್ನು ವಶಪಡಿಸಿಕೊಂಡರು.

ಫಾರ್ಮ್‌ಹೌಸ್‌ನಲ್ಲಿ ₹ 49 ಲಕ್ಷ ಹಣ ಪತ್ತೆ

ಬೆಳಗಾವಿ: ನಗರ ಸೇರಿ ಜಿಲ್ಲೆಯ ಮೂರು ಕಡೆ ಮೂವರು ಅಧಿಕಾರಿಗಳ ಮನೆಗಳ ಮೇಲೆ‌ ದಾಳಿ ನಡೆಸಿದಾಗ, ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಡಿಬಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದಪ್ಪ ಭಜಂತ್ರಿ ಅವರಿಗೆ ಸೇರಿದ ಸವದತ್ತಿ ತಾಲ್ಲೂಕಿನ ಉಗರಗೋಳದ ಫಾರ್ಮ್‌ಹೌಸ್‌ನಲ್ಲಿ ಬಚ್ಚಿಡಲಾಗಿದ್ದ ₹40 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದೆ’ ಎಂದು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಹಣಮಂತರಾಯ ತಿಳಿಸಿದ್ದಾರೆ.

‘₹1.85 ಲಕ್ಷ ಮೌಲ್ಯದ ಸ್ಥಿರಾಸ್ತಿ, ₹ 94.22 ಲಕ್ಷ ಮೌಲ್ಯದ ಚರಾಸ್ತಿಗಳು ಏಳು ಸ್ಥಳಗಳಲ್ಲಿ ಪತ್ತೆಯಾಗಿವೆ. ಇದರೊಂದಿಗೆ ಹಲವು ಸ್ವತ್ತಿನ ದಾಖಲೆಗಳೂ ಸಿಕ್ಕಿವೆ. ಅವರಿಗೆ ಸೇರಿದ ಧಾರವಾಡದ ಸಂಬಂಧಿಯೊಬ್ಬರ ಮನೆಯಲ್ಲೂ ಚಿನ್ನ ಹಾಗೂ ಬೆಳ್ಳಿಯ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾಗಿರುವ ವೆಂಕಟೇಶ ಮಜುಮದಾರ್ ಅವರ ಬೆಳಗಾವಿಯ ಮನೆ ಮೇಲೂ ದಾಳಿ ಮಾಡಲಾಗಿದೆ. ಈ ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಐಶಾರಾಮಿ ಮನೆ ಖರೀದಿಸಿದ್ದಾರೆ.

ನಿಪ್ಪಾಣಿ ‌ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಶಿವಪ್ಪ ಢವಳೇಶ್ವರ ಅವರ ಮನೆ, ಕಚೇರಿ, ಸಂಬಂಧಿಕರ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆದಿದೆ. ವಿಠ್ಠಲ ಅವರು ಎರಡು ತಿಂಗಳ ಹಿಂದೆ ₹1.10 ಕೋಟಿ ಹಣವನ್ನು ದಾಖಲೆಗಳಿಲ್ಲದೆ ಸಾಗಿಸುವಾಗ ಸಿಕ್ಕಿಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.