ADVERTISEMENT

RTO ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ: ದಾಖಲೆ ಇಲ್ಲದ ₹3.45 ಲಕ್ಷ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:11 IST
Last Updated 8 ಅಕ್ಟೋಬರ್ 2024, 14:11 IST
ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ ಪತ್ತೆಯಾದ ದಾಖಲೆ ಇಲ್ಲದ ಹಣವನ್ನು ಲೆಕ್ಕಹಾಕಿದ ಸಿಬ್ಬಂದಿ
ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ ಪತ್ತೆಯಾದ ದಾಖಲೆ ಇಲ್ಲದ ಹಣವನ್ನು ಲೆಕ್ಕಹಾಕಿದ ಸಿಬ್ಬಂದಿ   

ಬೆಂಗಳೂರು: ರಾಜ್ಯದ ಎಂಟು ಜಿಲ್ಲೆಗಳ 12 ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿ (ಆರ್‌ಟಿಒ) ಚೆಕ್‌ಪೋಸ್ಟ್‌ಗಳಲ್ಲಿ ಲೋಕಾಯುಕ್ತ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಈ ವೇಳೆ ದಾಖಲೆ ಇಲ್ಲದ ಒಟ್ಟು ₹3.45 ಲಕ್ಷ ಪತ್ತೆಯಾಗಿದೆ.

‘ಆರ್‌ಟಿಒ ಅಧಿಕಾರಿಗಳು ಮಧ್ಯವರ್ತಿಗಳ ಜತೆ ಶಾಮೀಲಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಸಂಬಂಧ ದೂರುಗಳು ಬಂದಿದ್ದವು. ಹೀಗಾಗಿ, ದೂರು ಬಂದಿದ್ದ ಚೆಕ್‌ಪೋಸ್ಟ್‌ಗಳ ಮೇಲೆ ಮಂಗಳವಾರ ನಸುಕಿನ 2.30ರಲ್ಲಿ ದಾಳಿ ನಡೆಸಲಾಯಿತು’ ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.

‘ಬಳ್ಳಾರಿಯ ಹಗರಿ ಚೆಕ್‌ಪೋಸ್ಟ್‌ ಮೇಲೆ ದಾಳಿ ನಡೆಸಿದಾಗ, ಕಂತೆ ಕಟ್ಟಿದ್ದ ನಗದನ್ನು ಸಿಬ್ಬಂದಿ ಕಿಟಕಿಯಿಂದ ಹೊರಕ್ಕೆ ಎಸೆದರು. ಅದನ್ನು ವಶಕ್ಕೆ ಪಡೆದು, ದಾಖಲೆಗಳನ್ನು ಪರಿಶೀಲಿಸಲಾಯಿತು. ಆ ಹಣಕ್ಕೆ ಯಾವುದೇ ದಾಖಲೆ ಇಲ್ಲದ್ದು ಗೊತ್ತಾಯಿತು. ಸಿಬ್ಬಂದಿಯಿಂದ ಸಮರ್ಪಕ ವಿವರಣೆಯೂ ದೊರೆಯಲಿಲ್ಲ’ ಎಂದು ಲೋಕಾಯುಕ್ತ ಹೇಳಿದೆ.

ADVERTISEMENT

‘ಬೇರೆ ಜಿಲ್ಲೆಗಳ ಚೆಕ್‌ಪೋಸ್ಟ್‌ಗಳಲ್ಲೂ ದಾಖಲೆ ಇಲ್ಲದ ನಗದು ಪತ್ತೆಯಾಗಿದೆ. ಅದೆಲ್ಲವನ್ನೂ ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಲಾಗಿದೆ. ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆ’ ಎಂದು ತಿಳಿಸಿದೆ.

‘ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಅಲ್ಲದೆ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಇಲ್ಲದೇ ಇರುವುದು, ವಾಹನಗಳ ದಾಖಲೆಗಳ ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ, ಲಂಚ ನೀಡಬಾರದು ಎಂಬ ಘೋಷಣೆ ಮತ್ತು ಲೋಕಾಯುಕ್ತ ದೂರು ಸಂಪರ್ಕ ಸಂಖ್ಯೆ ಇರುವ ಫಲಕ ಹಾಕದೇ ಇರುವುದು ಸೇರಿ ಹಲವು ಲೋಪಗಳು ಪತ್ತೆಯಾಗಿವೆ’ ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.

ಲಂಚಕ್ಕೆ ಗೃಹರಕ್ಷಕರ ಬಳಕೆ: ‘ಆರ್‌ಟಿಒ ಚೆಕ್‌ಪೋಸ್ಟ್‌ಗಳಲ್ಲಿ ಸರಕು ಸಾಗಣೆ ಮತ್ತು ಪ್ರವಾಸಿ ವಾಹನಗಳ ಚಾಲಕರಿಂದ ಲಂಚ ಪಡೆಯಲು ಗೃಹ ರಕ್ಷಕ ಸಿಬ್ಬಂದಿ ಮತ್ತು ಇತರ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿರುವುದು ಪತ್ತೆಯಾಗಿದೆ’ ಎಂದು ಲೋಕಾಯುಕ್ತ ತಿಳಿಸಿದೆ.

ಪತ್ತೆಯಾದ ಅಕ್ರಮ ಹಣ

₹2 ಲಕ್ಷವಿಜಯಪುರದ ಝಳಕಿ ಚೆಕ್‌ಪೋಸ್ಟ್‌ ₹45000, ಬಳ್ಳಾರಿಯ ಹಗರಿ ಚೆಕ್‌ಪೋಸ್ಟ್ ₹45000, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಚೆಕ್‌ಪೋಸ್ಟ್ ₹42000, ಬೀದರ್‌ನ ಹುಮನಾಬಾದ್‌ ಚೆಕ್‌ಪೋಸ್ಟ್‌ ₹13500 ಪತ್ತೆಯಾಗಿದೆ.

ಬೆಳಗಾವಿಯ ನಿಪ್ಪಾಣಿ ಚೆಕ್‌ಪೋಸ್ಟ್‌, ಕೋಲಾರದ ಶ್ರೀನಿವಾಸಪುರ ಮತ್ತು ನಂಗಲಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಚಾಮರಾಜನಗರದ ಗುಂಡ್ಲುಪೇಟೆ ಚೆಕ್‌ಪೋಸ್ಟ್‌ ಮತ್ತು ಕಚೇರಿಗಳಲ್ಲೂ ಶೋಧ ನಡೆಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.