ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿದ್ದ ಕಡತಕ್ಕೆ ಸಂಬಂಧಿಸಿದ ಮಾಹಿತಿ ಸೋರಿಕೆ ಕುರಿತು ರಾಜಭವನದ ಸಚಿವಾಲಯದ ಪಾತ್ರದ ಕುರಿತು ತನಿಖೆ ನಡೆಸಲು ಅನುಮತಿ ನೀಡುವಂತೆ ಲೋಕಾಯುಕ್ತ ವಿಶೇಷ ತನಿಖಾ ತಂಡದ ಐಜಿಪಿ ಎಂ. ಚಂದ್ರಶೇಖರ್ ಅವರು ತನಿಖಾ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಮಾಹಿತಿ ಸೋರಿಕೆ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲರು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಆಗಸ್ಟ್ 20ರಂದು ಪತ್ರ ಬರೆದಿದ್ದರು. ಈ ಬಗ್ಗೆ ಆಂತರಿಕ ತನಿಖೆ ನಡೆಸಿದ ಬಳಿಕ ಸೆಪ್ಟೆಂಬರ್ 4ರಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಖರ್ಬೀಕರ್ ಅವರಿಗೆ ಪತ್ರ ಬರೆದಿರುವ ಚಂದ್ರಶೇಖರ್, ರಾಜಭವನದ ಸಚಿವಾಲಯದಲ್ಲಿ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುತ್ತಿರುವ ಲೋಕಾಯುಕ್ತದ ವಿಶೇಷ ತನಿಖಾ ತಂಡವು, ಕುಮಾರಸ್ವಾಮಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ 2023 ಸೆಪ್ಟೆಂಬರ್ 24ರಂದು ಮುಚ್ಚಿದ ಲಕೋಟೆಯಲ್ಲಿ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿತ್ತು. ಎಂಟು ತಿಂಗಳಿನಿಂದ ಕಡತ ರಾಜ್ಯಪಾಲರ ಸಚಿವಾಲಯದಲ್ಲೇ ಬಾಕಿ ಇತ್ತು. ಈ ಕುರಿತ ಮಾಹಿತಿ ಆ.7ರಂದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಮಾಹಿತಿ ಸೋರಿಕೆಯಲ್ಲಿ ಎಸ್‌ಐಟಿ ಪಾತ್ರ ಇಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಎಸ್‌ಐಟಿ ಮುಖ್ಯಸ್ಥರೂ ಆಗಿರುವ ಐಜಿಪಿ ಪತ್ರದಲ್ಲಿ ತಿಳಿಸಿದ್ದಾರೆ.
‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 19ರ ಪ್ರಕಾರ, ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿದ ಪ್ರಸ್ತಾವಗಳನ್ನು ನಾಲ್ಕು ತಿಂಗಳೊಳಗೆ ವಿಲೇವಾರಿ ಮಾಡಬೇಕಿದೆ. ರಾಜ್ಯಪಾಲರ ಸಚಿವಾಲಯವು ಕಡತವನ್ನು ಎಂಟು ತಿಂಗಳಿಗೂ ಹೆಚ್ಚು ಬಾಕಿ ಇರಿಸಿಕೊಂಡಿದ್ದು ಕಾಯ್ದೆಯ ಉಲ್ಲಂಘನೆ. ಎಂಟು ತಿಂಗಳಿನಿಂದ ರಾಜಭವನದ ಸಚಿವಾಲಯದಲ್ಲಿ ಇದ್ದ ಕಡತದ ಮಾಹಿತಿ ಹೇಗೆ ಸೋರಿಕೆ ಆಗಿದೆ ಎಂಬುದನ್ನು ತನಿಖೆ ನಡೆಸುವ ಅಗತ್ಯವಿದೆ’ ಎಂದು ಉಲ್ಲೇಖಿಸಿದ್ದಾರೆ.
‘ರಾಜಭವನ ಮತ್ತು ಎಸ್‌ಐಟಿ ಕಚೇರಿ ಎರಡೂ ಬೆಂಗಳೂರಿನಲ್ಲೇ ಇವೆ. ರಾಜಭವನದ ಸಚಿವಾಲಯದಿಂದ ಜುಲೈ 29ರಂದು ಬರೆದ ಪತ್ರವು ಆಗಸ್ಟ್ 8ರಂದು ಎಸ್‌ಐಟಿ ಕಚೇರಿಗೆ ತಲುಪಿದೆ. ಬೆಂಗಳೂರಿನಲ್ಲೇ ಪತ್ರ ವಿಲೇವಾರಿಗೆ ಹತ್ತು ದಿನ ಆಗಿದೆ. ಈ ಬಗ್ಗೆಯೂ ಸ್ಪಷ್ಟತೆ ಪಡೆಯಬೇಕಿದೆ. ಮಾಹಿತಿ ಸೋರಿಕೆಯ ಮೂಲವನ್ನು ಪತ್ತೆಹಚ್ಚಲು ರಾಜಭವನದ ಸಚಿವಾಲಯದಲ್ಲಿ ತನಿಖೆ ನಡೆಸಬೇಕಿದೆ. ತನಿಖೆಗೆ ಅನುಮತಿ ನೀಡಬೇಕು’ ಎಂದು ಎಸ್‌ಐಟಿ ಐಜಿಪಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.