ADVERTISEMENT

₹16.5 ಲಕ್ಷ ಲಂಚ; ಬೆಸ್ಕಾಂ ಎಇಇ, ಜೆಇ ಬಂಧನ

ಆವಲಹಳ್ಳಿ ಬೆಸ್ಕಾಂ ಕಚೇರಿ: ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:44 IST
Last Updated 24 ಅಕ್ಟೋಬರ್ 2024, 15:44 IST
ದಾಳಿಯ ವೇಳೆ ವಶಕ್ಕೆ ಪಡೆಯಲಾದ ₹16.50 ಲಕ್ಷ
ದಾಳಿಯ ವೇಳೆ ವಶಕ್ಕೆ ಪಡೆಯಲಾದ ₹16.50 ಲಕ್ಷ   

ಬೆಂಗಳೂರು: ನೂತನ ವಸತಿ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ₹16 ಲಕ್ಷ ಲಂಚ ಪಡೆಯುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿ ಬೆಸ್ಕಾಂ ಕಚೇರಿಯ ಎಇಇ ಮತ್ತು ಜೆಇಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌.ಪುರದ ಆವಲಹಳ್ಳಿ ವ್ಯಾಪ್ತಿಯ ಬೊಮ್ಮನಹಳ್ಳಿಯ ಮುತ್ತುಸ್ವಾಮಿ ಅವರು ತಮ್ಮ ಜಮೀನಿನಲ್ಲಿ ವಸತಿ ಬಡಾವಣೆ ನಿರ್ಮಿಸಿದ್ದರು. ಬಡಾವಣೆಯ ವಿದ್ಯುತ್ ಸಂಪರ್ಕ ಮತ್ತಿತರ ಕೆಲಸಗಳನ್ನು ಶ್ರೀ ಚಕ್ರ ಎಲೆಕ್ಟ್ರಿಕಲ್ಸ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಿದ್ದರು.

ಸಂಸ್ಥೆಯ ವ್ಯವಸ್ಥಾಪಕ ವಿಜಯ್ ಕುಮಾರ್‌, ವಿದ್ಯುತ್ ಸಂಪರ್ಕ ಸಂಬಂಧ ಕೆಲಸಗಳಿಗಾಗಿ ಬೆಸ್ಕಾಂನ ಆವಲಹಳ್ಳಿ ಕಚೇರಿಯ ಎಇಇ ರಮೇಶ್‌ ಬಾಬು ಅವರನ್ನು ಸೆಪ್ಟೆಂಬರ್ 25ರಂದು ಭೇಟಿ ಮಾಡಿದ್ದರು. ಎಲ್ಲ ಕೆಲಸಗಳಿಗೆ ಎಷ್ಟು ಶುಲ್ಕವಾಗುತ್ತದೆ ಎಂದು ಕೇಳಿದ್ದರು. ಆಗ ರಮೇಶ್‌ ಬಾಬು, ‘ಜೆಇ ನಾಗೇಶ್‌ ಅವರನ್ನು ಭೇಟಿ ಮಾಡಿ, ಅವರು ಮಾಹಿತಿ ನೀಡುತ್ತಾರೆ. ಅಲ್ಲಿಯವರೆಗೆ ನಿಮ್ಮ ಕಡತ ಹಾಗೇ ಇರುತ್ತದೆ’ ಎಂದು ತಿಳಿಸಿದ್ದರು.

ADVERTISEMENT

ಅದರಂತೆ ರಮೇಶ್‌ ಬಾಬು ಅವರು ನಾಗೇಶ್‌ ಅವರನ್ನು ಭೇಟಿ ಮಾಡಿದಾಗ, ₹16.50 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಿಜಯ್‌ಕುಮಾರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಪ್ರಕಾರ ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ರಮೇಶ್‌ ಬಾಬು ಅವರ ಸೂಚನೆಯಂತೆ ವಿಜಯ್‌ಕುಮಾರ್‌ ಅವರು, ಬೊಮ್ಮನಹಳ್ಳಿಯ ನ್ಯೂ ರಾಯಲ್‌ ಫ್ರೆಶ್‌ ಮಾರ್ಕೆಟ್‌ ಬಳಿ ಜೆಇ ನಾಗೇಶ್‌ ಅವರಿಗೆ ಗುರುವಾರ ₹16.50 ಲಕ್ಷ ನೀಡಿದ್ದರು. ಅದೇ ವೇಳೆ, ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ರಮೇಶ್ ಅವರ ತಂಡವು ದಾಳಿ ನಡೆಸಿ ನಾಗೇಶ್‌ ಮತ್ತು ರಮೇಶ್ ಅವರನ್ನು ಬಂಧಿಸಿತು.

ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್‌‍ಪಿ ಪವನ್‌ ನೆಜ್ಜೂರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ದಾಳಿಯ ವೇಳೆ ಬಂಧಿತರಿಂದ ₹16.50 ಲಕ್ಷ ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.