ಬೆಂಗಳೂರು: ‘ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿ ಬಂದ ದೂರುಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಲೋಕಾಯುಕ್ತಕ್ಕೆ ಕಡತಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದು, ಲೋಕಾಯುಕ್ತದವರು ಸ್ಪಷ್ಟಿಕರಣ ನೀಡಲಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಲೋಕಾಯುಕ್ತದಿಂದ ದೂರುಗಳ ಕಡತ ಹೋಗಿದೆ. ಬಳಿಕ ಸ್ಪಷ್ಟೀಕರಣ ಕೇಳಿ ವಾಪಸ್ ಕಳುಹಿಸಿದ್ದೇನೆಂದು ರಾಜ್ಯಪಾಲರು ಹೇಳುತ್ತಿದ್ದಾರೆ. ಲೋಕಾಯುಕ್ತದಿಂದ ಸ್ಪಷ್ಟೀಕರಣ ಬರುವವರೆಗೂ ಕಡತ ತಿರಸ್ಕೃತ ಆಗುವುದಿಲ್ಲ. ರಾಜ್ಯಪಾಲರ ಬಳಿ ಇದ್ದಂತೆ ಅಲ್ಲವೇ? ಅದನ್ನೇ ರಾಜ್ಯಪಾಲರು ನನ್ನ ಬಳಿ ದೂರುಗಳು ಬಾಕಿ ಇಲ್ಲ ಎಂದು ಹೇಳುತ್ತಿದ್ದಾರೆ’ ಎಂದರು.
‘ರಾಜ್ಯಪಾಲರ ಕಚೇರಿಯಿಂದ ಮೂರು ದೂರುಗಳ ಕುರಿತು ಸ್ಪಷ್ಟೀಕರಣ ಕೇಳಿದ್ದಾರೆ ಎಂದಾದರೆ ಲೋಕಾಯುಕ್ತದವರು ಸುಮ್ಮನೆ ಇರಲು ಬರುವುದಿಲ್ಲ. ಸ್ಪಷ್ಟೀಕರಣ ನೀಡಬೇಕಾಗುತ್ತದೆ. ನಂತರದ ವಿಚಾರ ರಾಜ್ಯಪಾಲರಿಗೆ ಬಿಟ್ಟದ್ದು’ ಎಂದು ಹೇಳಿದರು.
‘ರಾಜ್ಯಪಾಲರು ಒಂದು ಕಡತ ಮಾತ್ರ ಇದೆ ಎಂದು ತಿಳಿಸಿದರು. ಅದು ಎಚ್.ಡಿ. ಕುಮಾರಸ್ವಾಮಿಯವರದ್ದು ಎನ್ನುವುದು ಗೊತ್ತಾಗಿದೆ. ಅದಕ್ಕಾದರೂ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಕಾನೂನು ರೀತಿ ಇದೆಯೇ, ಕಾನೂನು ಬಾಹಿರವಾಗಿದೆಯೇ ಎಂಬುದನ್ನು ಲೋಕಾಯುಕ್ತದವರು ತಿಳಿಸಿದ್ದಾರೆ. ಅದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ರಾಹುಲ್ ಖರ್ಗೆ ಅವರ ಸಿದ್ದಾರ್ಥ ಟ್ರಸ್ಟ್ಗೆ ನೀಡಿರುವ ಕೆಐಎಡಿಬಿ ನಿವೇಶನದ ಬಗ್ಗೆ ರಾಜ್ಯಪಾಲರ ಬಳಿ ಚರ್ಚೆ ಆಗಿಲ್ಲ. ವಿಶೇಷ ಅಧಿವೇಶನ ಕರೆಯುವ ಬಗ್ಗೆ ಮುಖ್ಯಮಂತ್ರಿ ಬಳಿ ಪ್ರಸ್ತಾಪ ಆಗಿಲ್ಲ’ ಎಂದ ಅವರು, ‘ಕೋರ್ಟ್ ತೀರ್ಪು ಆಧರಿಸಿ, ಮುಂದಿನ ಬೆಳವಣಿಗೆಗಳನ್ನು ನೋಡಿ ರಾಷ್ಟ್ರಪತಿ ಭೇಟಿಯ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.
‘ಮುಡಾ ವಿಚಾರದಿಂದ ಮುಖ್ಯಮಂತ್ರಿ ಆತಂಕಗೊಂಡಿದ್ದಾರೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಮುಖ್ಯಮಂತ್ರಿ ಆತಂಕದಲಿಲ್ಲ. ಎಲ್ಲ ವಿಚಾರದಲ್ಲೂ ಸ್ಪಷ್ಟವಾಗಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಯಾವುದೇ ರೀತಿಯ ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ ಎಂಬುದನ್ನುಈಗಾಗಲೇ ಸ್ಪಷ್ಟಪಡಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.