ನವದೆಹಲಿ: ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಸಂಜೆ ಬಿಡುಗಡೆ ಮಾಡಿರುವ ಬಿಜೆಪಿ, 15 ಜನ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ.
ಹಾಲಿ ಸದಸ್ಯರ ಪೈಕಿ ಕರಡಿ ಸಂಗಣ್ಣ ಪ್ರತಿನಿಧಿಸುವ ಕೊಪ್ಪಳ ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕೋಡಿ, ರಾಯಚೂರು ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಕ್ಷೇತ್ರಗಳ ಟಿಕೆಟ್ ಘೋಷಿಸಲಾಗಿಲ್ಲ.
ವಿರೋಧದ ನಡುವೆಯೂ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ತುಮಕೂರು ಕ್ಷೇತ್ರದಿಂದ ಮಾಜಿ ಸಂಸದ ಜಿ.ಎಸ್. ಬಸವರಾಜ್ ಅವರಿಗೆ ಟಿಕೆಟ್ ಅಂತಿಮಗೊಳಿಸುವಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗುವ ಮೂಲಕ ಮೇಲುಗೈ ಸಾಧಿಸಿದಂತಾಗಿದೆ. ಪಕ್ಷದಲ್ಲೇ ಭಾರಿ ವಿರೋಧವಿದ್ದರೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಟಿಕೆಟ್ ನೀಡಲಾಗಿದೆ. ವಿ.ಶ್ರೀನಿವಾಸಪ್ರಸಾದ್ ಅವರನ್ನು ಚಾಮರಾಜನಗರದಿಂದ ಕಣಕ್ಕೆ ಇಳಿಸಲಾಗಿದೆ.
ವಲಸಿಗರಿಗೆ ಮಣೆ: ಕಾಂಗ್ರೆಸ್‌ನಿಂದ ಇತ್ತೀಚೆಗೆ ವಲಸೆ ಬಂದಿರುವ ಮೂವರಿಗೆ ಪಕ್ಷ ಮನ್ನಣೆ ನೀಡಿದೆ. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕೃತ ಆಗದಿದ್ದರೂ ಕಲಬುರ್ಗಿಯಿಂದ ಉಮೇಶ ಜಾಧವ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್‌ಗೆ ಪ್ರತಿಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಹಾಸನದಲ್ಲಿ ಮಾಜಿ ಸಚಿವ ಎ.ಮಂಜು ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಗೋಕಾಕದ ಕಾಂಗ್ರೆಸ್ ಶಾಸಕ ರಮೇಶಜಾರಕಿಹೊಳಿ ಅವರ ಸಂಬಂಧಿ ವೈ.ದೇವೇಂದ್ರಪ್ಪ ಅವರಿಗೆ ಬಳ್ಳಾರಿಯಿಂದ ‘ಅಚ್ಚರಿ’ ಎಂಬಂತೆ ಪಕ್ಷದ ಟಿಕೆಟ್ ದೊರೆತಿದೆ. ಚುನಾವಣೆ ಫಲಿತಾಂಶ ನಂತರದ ಲೆಕ್ಕಾಚಾರದೊಂದಿಗೆ ದೇವೇಂದ್ರಪ್ಪ ಅವರಿಗೆ ಮಣೆ ಹಾಕಿರುವುದು ಸ್ಪಷ್ಟವಾಗಿದೆ.
ಇತ್ತೀಚೆಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸೋತಿದ್ದ ಶ್ರೀರಾಮುಲು ಅವರ ಸೋದರಿ ಜೆ.ಶಾಂತಾ, ನಾಲ್ಕು ದಿನಗಳ ಹಿಂದಷ್ಟೇ ಪಕ್ಷ ಸೇರಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರ ಸೋದರ ಬಿ.ವೆಂಕಟೇಶ ಪ್ರಸಾದ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಲಿಂಗಸಗೂರಿನ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರನ್ನು ಚಿತ್ರದುರ್ಗ (ಎಸ್.ಸಿ) ಕ್ಷೇತ್ರದಿಂದ ಕಣಕ್ಕಿಳಿಸಲು ಒಲವು ತೋರಿದ್ದ ಯಡಿಯೂರಪ್ಪ ಅವರ ಮನ ಒಲಿಸುವ ಮೂಲಕ ಮಾಜಿ ಸಚಿವ, ದಲಿತ ಎಡಗೈ ಸಮುದಾಯದ ಆನೇಕಲ್ ನಾರಾಯಣಸ್ವಾಮಿ ಸ್ಪರ್ಧೆಗೆ ಪಕ್ಷದ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ.
ಬೆಂಗಳೂರು ದಕ್ಷಿಣ, ಮಂಡ್ಯ: ಕುತೂಹಲ ಬಾಕಿ
ಕಳೆದ ನವೆಂಬರ್‌ನಲ್ಲಿ ಮೃತಪಟ್ಟಿರುವ ಹಿರಿಯ ಮುಖಂಡ ಅನಂತಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು (ದಕ್ಷಿಣ) ಕ್ಷೇತ್ರದ ಟಿಕೆಟ್ ಘೋಷಿಸಲಾಗಿಲ್ಲ.
ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನೇ ಕಣಕ್ಕಿಳಿಸಲು ರಾಜ್ಯ ಮುಖಂಡರೆಲ್ಲ ಒಲವು ತೋರಿದ್ದರ ನಡುವೆಯೂ, ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ವಿರುದ್ಧ ಅಂಬರೀಷ್ ಪತ್ನಿ ಸುಮಲತಾ ಪಕ್ಷೇತರರರಾಗಿ ಸ್ಪರ್ಧಿಸಲಿರುವ ಮಂಡ್ಯ ಕ್ಷೇತ್ರದ ಹುರಿಯಾಳನ್ನೂ ಘೋಷಿಸದೆ ಕಾದು ನೋಡುವ ತಂತ್ರ ಅನುಸರಿಸಲಾಗಿದೆ.
ಜೆಡಿಎಸ್ ಸೋಲಿಸಲು ಸುಮಲತಾ ಅವರಿಗೆ ಬೆಂಬಲ ನೀಡುವುದೋ ಅಥವಾ ಕಡೆ ಗಳಿಗೆಯಲ್ಲಿ ಅಭ್ಯರ್ಥಿ ಕಣಕ್ಕಿಳಿಸುವುದೋ ಎಂಬ ನಿರ್ಧಾರವನ್ನು ವರಿಷ್ಠರು ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ
* ಬೆಳಗಾವಿ–ಸುರೇಶ ಅಂಗಡಿ
*ಹಾವೇರಿ– ಶಿವಕುಮಾರ ಉದಾಸಿ
* ಧಾರವಾಡ– ಪ್ರಹ್ಲಾದ್‌ಜೋಷಿ
* ಉತ್ತರ ಕನ್ನಡ– ಅನಂತಕುಮಾರ್ ಹೆಗಡೆ
* ದಾವಣಗೆರೆ– ಜಿ.ಎಂ.ಸಿದ್ದೇಶ್ವರ
* ಶಿವಮೊಗ್ಗ –ಬಿ.ವೈ.ರಾಘವೇಂದ್ರ
* ಉಡುಪಿ–ಚಿಕ್ಕಮಗಳೂರು– ಶೋಭಾ ಕರಂದ್ಲಾಜೆ
* ಹಾಸನ– ಎ.ಮಂಜು
* ದಕ್ಷಿಣ ಕನ್ನಡ– ನಳೀನ್ ಕುಮಾರ್ ಕಟೀಲ್
*ತುಮಕೂರು– ಜಿ.ಎಸ್.ಬಸವರಾಜು
* ಮೈಸೂರು– ಪ್ರತಾಪ್ ಸಿಂಹ
* ಬೆಂಗಳೂರು ಉತ್ತರ–ಡಿ.ವಿ.ಸದಾನಂದಗೌಡ
* ಬೆಂಗಳೂರು ಕೇಂದ್ರ–ಪಿ.ಸಿ.ಮೋಹನ್
* ಚಿಕ್ಕಬಳ್ಳಾಪುರ– ಬಿ.ಎನ್.ಬಚ್ಚೇಗೌಡ
* ಬಳ್ಳಾರಿ–ದೇವೇಂದ್ರಪ್ಪ
* ಕಲ್ಬುರ್ಗಿ–ಉಮೇಶ ಜಾಧವ್
* ಚಿತ್ರದುರ್ಗ–ಎ.ನಾರಾಯಣಸ್ವಾಮಿ
* ಚಾಮರಾಜನಗರ– ಶ್ರೀನಿವಾಸ ಪ್ರಸಾದ್
*ವಿಜಯಪುರ–ರಮೇಶ್ ಜಿಗಜಿಣಗಿ
* ಬಾಗಲಕೋಟೆ–ಪಿ.ಸಿ. ಗದ್ದಿಗೌಡರ್
*ಬೀದರ್–ಭಗವಂತ್ ಖೂಬಾ
ಕಾಂಗ್ರೆಸ್ ಪಟ್ಟಿಗೆ ಇಂದು ಮುಕ್ತಿ?
ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ನಾಲ್ಕು ದಿನ ಬಾಕಿ ಉಳಿದಿದ್ದು, ಕಾಂಗ್ರೆಸ್ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
ಸಂಭವನೀಯ ಪಟ್ಟಿಯನ್ನುರಾಜ್ಯ ಚುನಾವಣಾ ಸಮಿತಿ ಹೈಕಮಾಂಡ್‌ಗೆ ಸಲ್ಲಿಸಿದೆ. ಗುರುವಾರ ದೆಹಲಿಗೆ ತೆರಳಿದ್ದ ರಾಜ್ಯ ನಾಯಕರು ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರಮುಖರ ಜತೆ ಚರ್ಚಿಸಿದರು. ಎಐಸಿಸಿಯ ಚುನಾವಣಾ ಸಮಿತಿ ಸಭೆ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಲಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳು ಘೋಷಣೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.