ADVERTISEMENT

ದೀರ್ಘ ಕಾಲದ ಗೈರು: ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 16:03 IST
Last Updated 25 ಮಾರ್ಚ್ 2024, 16:03 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ಅನಾರೋಗ್ಯದ ಕಾರಣ ನೀಡಿ ಅನಧಿಕೃತವಾಗಿ ಎಂಟು ತಿಂಗಳ ಕಾಲ ಕರ್ತವ್ಯಕ್ಕೆ ಗೈರಾಗಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕಂಪನಿ ಉದ್ಯೋಗಿಯೊಬ್ಬರ ವಜಾ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌, ‘ಇದೊಂದು ಗಂಭೀರ ದುರ್ನಡತೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಸಂಬಂಧ ಎಚ್‌ಎಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿದೆ. ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶದಂತೆ ಉದ್ಯೋಗಿಯಿಂದ ಪಡೆಯಲಾಗಿದ್ದ ₹2.2 ಲಕ್ಷ ಮೊತ್ತವನ್ನು ಹಿಂತಿರುಗಿಸುವಂತೆ ಎಚ್‌ಎಎಲ್‌ಗೆ ಆದೇಶಿಸಿದೆ.

ADVERTISEMENT

ಪ್ರಕರಣವೇನು?: ಎಚ್‌ಎಎಲ್‌ನ ವಿನ್ಯಾಸ ವಿಭಾಗದಲ್ಲಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಎ.ಕೆ.ಸಿನ್ಹಾ ಅನಾರೋಗ್ಯದ ಕಾರಣ ನೀಡಿ 2016ರ ಸೆ‍ಪ್ಟೆಂಬರ್ 22ರಿಂದ 2017ರ ಜನವರಿ 6ರವರೆಗೆ ಸತತ 107 ದಿನಗಳ ಕಾಲ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದರು. ಇಲಾಖಾ ವಿಚಾರಣೆ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅಂತೆಯೇ, ಸೇವಾ ಗುತ್ತಿಗೆ ಉಲ್ಲಂಘನೆ ಆರೋಪದಡಿ ₹ 2.2 ಲಕ್ಷ ಪಾವತಿಸುವಂತೆ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಿನ್ಹಾ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಿದ್ದರು.

ವಜಾ ಅದೇಶವನ್ನು ಪರಿಷ್ಕರಿಸಿದ್ದ ಮೇಲ್ಮನವಿ ಪ್ರಾಧಿಕಾರ, ಸೇವೆಯಿಂದ ವಜಾಗೊಳಿಸಿದ್ದನ್ನು ‘ತೆಗೆದು ಹಾಕಲಾಗಿದೆ’ ಎಂಬ ಕಾರಣ ನೀಡಿ ಆದೇಶವನ್ನು ಮಾರ್ಪಾಡು ಮಾಡಿತ್ತು. ಪ್ರಾಧಿಕಾರದ ಈ ಆದೇಶವನ್ನು ಏಕಸದಸ್ಯ ನ್ಯಾಯಪೀಠದಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ 2023ರ ನವೆಂಬರ್‌ನಲ್ಲಿ ವಜಾ ಆದೇಶವನ್ನು ರದ್ದುಗೊಳಿಸಿ, ಕಂಪನಿಯು, ಉದ್ಯೋಗಿಯಿಂದ ಪಡೆದಿದ್ದ ಹಣವನ್ನು ವಾಪಸು ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಎಚ್‌ಎಎಲ್ ಮೇಲ್ಮನವಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.