ADVERTISEMENT

ಲಾರಿ ಮಾಲೀಕರಿಂದ ಮುಷ್ಕರದ ಎಚ್ಚರಿಕೆ

ಹಳೆ ವಾಹನಗಳ ಎಫ್‌ಸಿ ಶುಲ್ಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 20:47 IST
Last Updated 8 ಏಪ್ರಿಲ್ 2022, 20:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘15 ವರ್ಷಕ್ಕೂ ಹಳೆಯದಾದ ವಾಹನಗಳ ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೇಟ್‌) ಶುಲ್ಕ ಹೆಚ್ಚಳ ಹಾಗೂ ಡೀಸೆಲ್‌ ಬೆಲೆ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 30 ದಿನಗಳೊಳಗೆ ಪರಿಹರಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಮುಷ್ಕರ ನಡೆಸುವುದು ಅನಿವಾರ್ಯ’ ಎಂದು ಕರ್ನಾಟಕ ಲಾರಿ ಮಾಲೀಕರ ಸಂಘ ಎಚ್ಚರಿಸಿದೆ.

‘15 ವರ್ಷಕ್ಕೂ ಹಳೆಯದಾದ ವಾಣಿಜ್ಯ ವಾಹನಗಳನ್ನು ಗುಜರಿಗೆ ಹಾಕುವಂತೆ ಮಾಡುವುದು ಸರ್ಕಾರದ ಉದ್ದೇಶ. ಹೀಗಾಗಿ ಮರು ನೋಂದಣಿ ಹಾಗೂ ದೃಢೀಕರಣ ಶುಲ್ಕಗಳನ್ನು ಏರಿಕೆ ಮಾಡಿದೆ’ ಎಂದು ಸಂಘದ ಅಧ್ಯಕ್ಷ ಜಿ.ಆರ್‌.ಷಣ್ಮುಖಪ್ಪ ಆರೋಪಿಸಿದರು.

‘ತೈಲ ಬೆಲೆ ಹೆಚ್ಚುತ್ತಲೇ ಇದೆ. ಸರಕು ಸಾಗಣೆ ವಾಹನಗಳನ್ನು ರಸ್ತೆಗಿಳಿಸುವುದೇ ಸವಾಲಾಗಿದೆ. ಇದನ್ನೇ ನಂಬಿದವರು ಬೀದಿಗೆ ಬೀಳುವ ಅಪಾಯವಿದೆ. ಕೋವಿಡ್‌ನಿಂದಾಗಿ ಸಾಕಷ್ಟು ಸಂಕಷ್ಟ ಎದುರಿಸಿದ್ದ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದರು.

ADVERTISEMENT

‘ಡೀಸೆಲ್‌ ಬೆಲೆ ಇಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆಯುವ ಅಧಿಕಾರಿಗಳು ತಪಾಸಣೆ ನೆಪದಲ್ಲಿ ಚಾಲಕರಿಗೆ ಕಿರುಕುಳ ನೀಡುವುದನ್ನು ತಪ್ಪಿಸಬೇಕು. ಅವಧಿ ಮೀರಿದರೂ ಕಾರ್ಯನಿರ್ವಹಿಸುತ್ತಿರುವ ಟೋಲ್‌ಗಳನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

‘30 ದಿನಗಳೊಳಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಇಲ್ಲದಿದ್ದರೆ ಮುಂದಿನ ತಿಂಗಳ 10ರಂದು ಸಭೆ ನಡೆಸಿ ಮುಷ್ಕರ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.