ಬೆಳಗಾವಿ: ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದಾಗಿ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್ ತನ್ನ ಬಲವನ್ನು ಮತ್ತಷ್ಟು ಕಳೆದುಕೊಂಡಿದೆ.
ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 2018ರ ಮೇನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 10 ಹಾಗೂ ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದಿತ್ತು. ಒಂದೂವರೆ ವರ್ಷದಲ್ಲೇ 3 ಕ್ಷೇತ್ರಗಳಿಗೆ ಎದುರಾದ ಉಪ ಚುನಾವಣೆಯ ಫಲಿತಾಂಶದ ನಂತರ ಬಿಜೆಪಿಯ ಕೈ ಮೇಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಶಾಸಕರ ಸಂಖ್ಯೆ 5ಕ್ಕೆ ಕುಸಿದಿದ್ದು, ಆ ಪಕ್ಷದ ಬೆಳವಣಿಗೆ ಚಿಂತಾಜನಕ ಸ್ಥಿತಿಯಲ್ಲಿರುವುದಕ್ಕೆ ಕನ್ನಡಿ ಹಿಡಿದಿದೆ.
2018ರ ಚುನಾವಣೆಯಲ್ಲಿ ಬಿಜೆಪಿಯು ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಕಿತ್ತೂರು, ಸವದತ್ತಿ–ಯಲ್ಲಮ್ಮ, ರಾಮದುರ್ಗ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಕುಡಚಿ ಮತ್ತು ಅರಭಾಂವಿಯಲ್ಲಿ ಗೆದ್ದಿತ್ತು. ಕಾಂಗ್ರೆಸ್ ಪಕ್ಷವು ಬೆಳಗಾವಿ ಗ್ರಾಮೀಣ, ಯಮಕನಮರಡಿ, ಖಾನಾಪುರ, ಬೈಲಹೊಂಗಲ, ಗೋಕಾಕ, ಅಥಣಿ, ಕಾಗವಾಡ ಹಾಗೂ ಚಿಕ್ಕೋಡಿ–ಸದಲಗಾದಲ್ಲಿ ಜಯಿಸಿತ್ತು. ಉಪ ಚುನಾವಣೆಯಲ್ಲಿ ಗೋಕಾಕ, ಕಾಗವಾಡ ಹಾಗೂ ಅಥಣಿ ಕ್ಷೇತ್ರಗಳು ಬಿಜೆಪಿ ಪಾಲಾಗಿರುವುದು ಕಮಲ ಪಕ್ಷದ ಸಂಘಟನೆಯು ಬಲಗೊಳ್ಳುತ್ತಿರುವುದಕ್ಕೆ ನಿದರ್ಶನವಾಗಿದೆ.
ಶಕ್ತಿ ವೃದ್ಧಿಸಿದ್ದಾರೆ:ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ ಬಿಜೆಪಿಗೆ ಬಂದು ಆ ಪಕ್ಷದ ‘ಶಕ್ತಿ’ಯನ್ನು ವೃದ್ಧಿಸಿದ್ದಾರೆ. ಪಕ್ಷದವರ ಸಂಘಟಿತ ಹೋರಾಟ, ತಳಮಟ್ಟದಲ್ಲಿ ಕೆಲಸ ಮಾಡಿದ ಆರ್‌ಎಸ್‌ಎಸ್ ಕಾರ್ಯಕರ್ತರ ಸಹಕಾರ, ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ಇವರು ಗೆಲುವು ಸಾಧಿಸಿದ್ದಲ್ಲದೇ, ಕಾಂಗ್ರೆಸ್‌ಗೆ ಮುಖಭಂಗವನ್ನುಂಟು ಮಾಡಿದ್ದಾರೆ.
ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ವಿಧಾನಸಭಾಧ್ಯಕ್ಷರಿಂದ ‘ಅನರ್ಹ ಶಾಸಕರು’ ಎನಿಸಿಕೊಂಡಿದ್ದ ಅವರು, ಜನತಾ ನ್ಯಾಯಾಲಯದಲ್ಲಿ ‘ಶಾಸಕರಾಗಲು ಅರ್ಹರು ಎನಿಸಿಕೊಂಡಿದ್ದೇವೆ’ ಎಂದು ಹೆಮ್ಮೆಯಿಂದ ಬೀಗುತ್ತಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಪ್ರಭಾವ ಕುಗ್ಗುತ್ತಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಇದೇ ವರ್ಷ ನಡೆದಿದ್ದ ಲೋಕಸಭಾ ಚುನಾವಣೆಯಲ್ಲೂ ಕೈ ಪ್ರಭಾವ ಬೀರಿರಲಿಲ್ಲ. ಆ ಪಕ್ಷದ ಅಭ್ಯರ್ಥಿಗಳು ಸೋಲನುಭವಿಸಿದ್ದರು. ಬೆಳಗಾವಿ ಕ್ಷೇತ್ರದಲ್ಲಿ ಸುರೇಶ ಅಂಗಡಿ ಪುನರಾಯ್ಕೆಯಾಗಿದ್ದರು. ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಗೆಲುವಿನ ನಗೆ ಬೀರಿದ್ದರು. ಖಾನಾಪುರ, ಕಿತ್ತೂರು ಕ್ಷೇತ್ರಗಳ ಪ್ರದೇಶಗಳು ಸೇರುವ ಉತ್ತರ ಕನ್ನಡ ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿತ್ತು.
ಜಿಲ್ಲೆಗೆ ಮತ್ತಷ್ಟು ಸಚಿವ ಸ್ಥಾನ?
ಜಿಲ್ಲೆಯವರಾದ ಲಕ್ಷ್ಮಣ ಸವದಿ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾರೆ. ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿರುವುದರಿಂದಾಗಿ, ಮತ್ತೆ ನಾಲ್ವರಿಗೆ ಸಚಿವ ಸ್ಥಾನ ಸಿಗುವುದೇ ಎನ್ನುವ ನಿರೀಕ್ಷೆ ಚಿಗುರಿದೆ.
ಗೋಕಾಕದಲ್ಲಿ ಪ್ರಚಾರ ಮಾಡಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಮೊದಲಾದವರು ರಮೇಶ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆಯುತ್ತದೆ ಎಂದು ಭರವಸೆ ನೀಡಿ ಮತಯಾಚಿಸಿದ್ದರು. ಈ ನಿಟ್ಟಿನಲ್ಲಿ ನೋಡಿದರೆ ರಮೇಶಗೆ ಡಿಸಿಎಂ ಪಟ್ಟ ಸಿಗುವುದೇ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.
ಅಥಣಿ ಮತ್ತು ಕಾಗವಾಡದಲ್ಲಿ ಪ್ರಚಾರ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕ್ರಮವಾಗಿ ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಭಾವಿ ಸಚಿವರೇ ಎಂದೇ ಕರೆದಿದ್ದರು. ಉಪ ಮುಖ್ಯಮಂತ್ರಿ ಸವದಿ ಕೂಡ ಇದನ್ನೇ ಮುಂದಿಟ್ಟು ಮತ ಕೇಳಿದ್ದರು. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡರೆ ಈ ಮೂವರಿಗೂ ಸಚಿವ ಸ್ಥಾನ ಸಿಗಬಹುದಾಗಿದೆ. ಅಲ್ಲದೇ, ಹುಕ್ಕೇರಿಯ ಶಾಸಕ ಉಮೇಶ ಕತ್ತಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ‘ಕತ್ತಿಗೆ ಕೊಡದಿದ್ದರೆ ಬಿಡುತ್ತಾರೆಯೇ?’ ಎಂದು ಖುದ್ದು ಯಡಿಯೂರಪ್ಪ ಅವರೇ ಪ್ರತಿಕ್ರಿಯಿಸಿದ್ದರು. ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವುದರಿಂದಾಗಿ, ಜಿಲ್ಲೆಯ ಇನ್ಯಾರು ಸಂಪುಟ ಸೇರಬಹುದು ಎನ್ನುವ ಚರ್ಚೆಗಳು ಆರಂಭವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.