ನವದೆಹಲಿ: ಬಡ ಜನರು ಕಡಿಮೆ ದರದಲ್ಲಿ ನಿವೇಶನ ಖರೀದಿಸಲು ಅನುಕೂಲವಾಗುವಂತೆ ಸುಲಭ ನೀತಿ ರೂಪಿಸಲು ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಸಹಕಾರ ಸಚಿವ, ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ನಿರ್ದೇಶಕ ಎಸ್.ಟಿ. ಸೋಮಶೇಖರ್ ಮನವಿ ಮಾಡಿದರು.
ಭಾನುವಾರ ಇಲ್ಲಿ ನಡೆದ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಬಡವರಿಗೆ ನಿವೇಶನ ಹಂಚಿಕೆ ಮಾಡಲು ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ಅಡಚಣೆಗಳಿವೆ. ಅವುಗಳನ್ನು ನಿವಾರಿಸುವಂತೆ ಕೇಂದ್ರದ ಸಹಕಾರ ಸಚಿವ ಅಮಿತ್ ಶಾ ಅವರಿಗೆ ಮನವರಿಕೆ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿಯ ಮುಂದಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಜನವರಿಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸುವಂತೆ ಮನವಿ ಮಾಡಿದ ಅವರು, ರಾಜ್ಯದ ವತಿಯಿಂದ ಆತಿಥ್ಯ ವಹಿಸಲು ಸಿದ್ಧ ಎಂದು ಹೇಳಿದರು.
ಈ ಮನವಿಯ ಕುರಿತು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾಮಂಡಳಿ ರಾಷ್ಟ್ರೀಯ ಅಧ್ಯಕ್ಷ ಬಿಜಯಕುಮಾರ್ ಸಿಂಗ್ ಭರವಸೆ ನೀಡಿದರು.
ದೇಶದ ಎಲ್ಲ ರಾಜ್ಯಗಳಲ್ಲಿ ಇರುವ ಸಹಕಾರಿ ವಸತಿ ಮಹಾಮಂಡಳಿಗಳ ಬಲವರ್ದನೆಗಾಗಿ ಅಗತ್ಯವಿರುವ ಮುಖ್ಯ ತಿದ್ದುಪಡಿ ತರಲು ಹಾಗೂ ರಾಷ್ಟ್ರೀಯ ಸಮಗ್ರ ವಸತಿ ನೀತಿ ಜಾರಿಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿಟ್ಟಿನಲ್ಲಿ ಸಭೆಯಲ್ಲಿ ವಿಸ್ತೃತ ಚರ್ಚೆಯನ್ನು ನಡೆಸಲಾಯಿತು.
ಮಹಾರಾಷ್ಟ್ರ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ಹರಿಯಾಣ ಸೇರಿದಂತೆ ಇತರ ರಾಜ್ಯಗಳ 15 ಜನ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.