ADVERTISEMENT

ತಗ್ಗಿದ ಮಳೆ ಅಬ್ಬರ: ಸಹಜ ಸ್ಥಿತಿಗೆ ಜನಜೀವನ

ಶ್ರೀರಂಗಪಟ್ಟಣ ಬಳಿ ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ಯುವಕನ ರಕ್ಷಣೆ l ಮಲೆನಾಡಿನಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2018, 19:30 IST
Last Updated 14 ಜುಲೈ 2018, 19:30 IST
ಧುಮ್ಮಿಕ್ಕುವ ಜಲಧಾರೆ... ಶನಿವಾರ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದ ಕ್ರಸ್ಟ್‌ಗೇಟ್‌ ಮೂಲಕ ನದಿಗೆ ನೀರು ಬಿಟ್ಟಾಗ ಕ್ಯಾಮೆರಾಗೆ ಸೆರೆಸಿಕ್ಕ ದೃಶ್ಯ
ಧುಮ್ಮಿಕ್ಕುವ ಜಲಧಾರೆ... ಶನಿವಾರ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದ ಕ್ರಸ್ಟ್‌ಗೇಟ್‌ ಮೂಲಕ ನದಿಗೆ ನೀರು ಬಿಟ್ಟಾಗ ಕ್ಯಾಮೆರಾಗೆ ಸೆರೆಸಿಕ್ಕ ದೃಶ್ಯ    

ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆಯ ಅಬ್ಬರ ಶನಿವಾರ ಕೊಂಚ ತಗ್ಗಿದ್ದು, ಮಲೆನಾಡಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಶನಿವಾರ ಸಾಧಾರಣ ಮಳೆ ಸುರಿದಿದ್ದು, ಗಾಳಿಯ ಆರ್ಭಟ ಜೋರಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಇಳಿದಿದ್ದು, ಮುಳುಗಡೆ ಆಗಿದ್ದ ಸೇತುವೆಗಳ ಮೇಲೆ ವಾಹನ ಸಂಚಾರ ಆರಂಭವಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಕಡಲ ಅಬ್ಬರ ಚಾರ್ಮಾಡಿಯಲ್ಲಿ ಭೂಕುಸಿತ: ಕರಾವಳಿ ಜಿಲ್ಲೆಗಳಲ್ಲಿ ಕಡಲು ಬಿರುಸುಗೊಂಡಿದೆ. ದಕ್ಷಿಣ ಕನ್ನಡದ ಸೋಮೇಶ್ವರ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಬಿರುಸಾಗಿದ್ದು, 50ಕ್ಕೂ ಅಧಿಕ ತೆಂಗು ಹಾಗೂ ಇತರೆ ಮರಗಳು ಸಮುದ್ರ ಪಾಲಾಗಿದೆ. ಉಚ್ಚಿಲ– ಉಳ್ಳಾಲ ಸಂಪರ್ಕಿಸುವ ರಸ್ತೆಗೂ ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ.ಸಮುದ್ರ ತೀರದ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿದೆ.

ADVERTISEMENT

ಮಲೆನಾಡಿನಲ್ಲಿ ಉತ್ತಮ ಮಳೆ: ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಚಾರ್ಮಾಡಿ ಘಾಟಿಯಲ್ಲಿ ಅನೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ. ಆದರೆ, ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಮಣ್ಣು ತೆರವು ಮಾಡಲಾಗುತ್ತಿದೆ.

ಕಳಸ–ಹೊರನಾಡು ರಸ್ತೆ ಹೆಬ್ಬೊಳೆ ಸೇತುವೆಯ ಮೇಲೆ ನೀರು ಹರಿದು ಸಂಚಾರ ಸ್ಥಗಿತಗೊಂಡಿದೆ.

ಶಿವಮೊಗ್ಗ ನಗರದಲ್ಲಿ ಸಾಧಾರಣ ಮಳೆಯಾಗಿದೆ. ಅರ್ಧ ದಿನ ಮಳೆ ಬಿಡುವು ನೀಡಿತ್ತು. ಸಾಗರ, ಶಿಕಾರಿಪುರ, ಭದ್ರಾವತಿ, ಸೊರಬ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಭರ್ತಿಯಾಗುವತ್ತ ಆಲಮಟ್ಟಿ: ವರದಾ ನದಿಗೆ ಪ್ರವಾಹ ಭೀತಿ

ಬೆಳಗಾವಿ/ಆಲಮಟ್ಟಿ: ನೆರೆಯ ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಶನಿವಾರ ಒಂದೇ ದಿನ 8 ಟಿಎಂಸಿ ಅಡಿ ನೀರು ಬಂದಿದೆ.

ಶುಕ್ರವಾರ 72.9 ಟಿಎಂಸಿ ಅಡಿ ಇದ್ದ ನೀರಿನ ಸಂಗ್ರಹ ಶನಿವಾರ 80.837 ಟಿಎಂಸಿ ಅಡಿಗೇರಿದೆ. ಜಲಾಶಯದ ಮೇಲ್ಭಾಗದ ಹಿಪ್ಪರಗಿ ಜಲಾಶಯದ ಎಲ್ಲ ಗೇಟ್‌ಗಳ ಮೂಲಕ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಭಾನುವಾರ ಸಂಜೆಯ ವೇಳೆಗೆ ಒಳಹರಿವು ಒಂದು ಲಕ್ಷ ಕ್ಯುಸೆಕ್‌ ತಲುಪಲಿದೆ. ಇದೇ ರೀತಿ ನೀರು ಹರಿದುಬಂದರೆ ನಾಲ್ಕು ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ ಎಂದು ಮೂಲಗಳು ತಿಳಿಸಿವೆ

ಬೆಳಗಾವಿ ವರದಿ: ಕೃಷ್ಣಾ ನದಿಯ ಮೂಲಕ ರಾಜ್ಯಕ್ಕೆ ಹರಿದು ಬರುತ್ತಿದ್ದ‌ ನೀರಿನ ಪ್ರಮಾಣ ಮುಂದುವರಿದಿದೆ.

ರಾಜಾಪುರ ಬ್ಯಾರೇಜ್‌ ಹಾಗೂ ದೂಧ್‌ಗಂಗಾ ಉಪನದಿ ಮೂಲಕ ಕೃಷ್ಣಾಗೆ 98,882 ಕ್ಯುಸೆಕ್‌ ನೀರು ಹರಿದುಬರುತ್ತಿದೆ.

ಕಾರವಾರ ವರದಿ: ತಾಲ್ಲೂಕಿನ ಕೈಗಾ ಸುತ್ತಮುತ್ತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭೂಕುಸಿತದ ಆತಂಕ ಎದುರಾಗಿದೆ.ಕೈಗಾ–ಯಲ್ಲಾಪುರ ಮಾರ್ಗದ ಮಧ್ಯೆ ವಾಹನ ಸಂಚಾರ ಕಷ್ಟವಾಗಿದೆ.

ಶಿರಸಿ ತಾಲ್ಲೂಕಿನ ವರದಾ ನದಿಗೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಬನವಾಸಿಯಿಂದ ಅಜ್ಜರಣಿಗೆ ಹೋಗುವ ಸೇತುವೆಯ ಮೇಲೆ ಎರಡು ಅಡಿ ನೀರು ಹರಿಯುತ್ತಿದೆ. ಸಿದ್ದಾಪುರ ತಾಲ್ಲೂಕಿನಲ್ಲಿ ಮರಗಳು ರಸ್ತೆಗೆ
ಉರುಳಿವೆ.

ವ್ಯಕ್ತಿ ನಾಪತ್ತೆ: ಹಾವೇರಿ ತಾಲ್ಲೂಕಿನ ನಾಗನೂರು ಬಳಿ ಶಕ್ರವಾರ ವರದಾ ನದಿಗೆ ಬಿದ್ದ ಲಾರಿಯನ್ನು ಇನ್ನೂ ಮೇಲೆತ್ತಲು ಸಾಧ್ಯವಾಗಿಲ್ಲ. ಲಾರಿಯಲ್ಲಿದ್ದ ಗುತ್ತಲದ ಬಸವರಾಜ ಸೋಮಣ್ಣವರ ಇನ್ನೂ ಪತ್ತೆಯಾಗಿಲ್ಲ.

20ರಂದು ತಲಕಾವೇರಿಗೆ ಮುಖ್ಯಮಂತ್ರಿ

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದ್ದು, ಜುಲೈ 20ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾವೇರಿ ನದಿಯ ಉಗಮ ಸ್ಥಳ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಶನಿವಾರ ತಿಳಿಸಿದರು.

ಬೈಕ್ ಮೇಲೆ ಮರ ಬಿದ್ದು ಮಾವ–ಅಳಿಯ ಸಾವು

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63ರ ಬೀರಗದ್ದೆ ಕ್ರಾಸ್ ಬಳಿ, ಚಲಿಸುತ್ತಿದ್ದ ಬೈಕ್ ಮೇಲೆ ಶನಿವಾರ ಮರ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಂಕೋಲಾ ತಾಲ್ಲೂಕಿನ ಹಳವಳ್ಳಿಯ ಕನ್ಕನಹಳ್ಳಿಯ ನಿವಾಸಿ ಸುಭಾಷ್‌ ಚಿತ್ಕರ್‌ (69) ಹಾಗೂ ಅವರ ಅಳಿಯ ನಾಗರಾಜ (25) ಮೃತಪಟ್ಟವರು. ಭಾರಿ ಗಾಳಿ ಮಳೆಗೆ ಮರ ಅವರ ಮೇಲೆ ಬಿದ್ದಿದೆ.

ನದಿಯಲ್ಲಿ ಕೊಚ್ಚಿ ಹೋದ ಯುವಕ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ಶನಿವಾರ ನೀರು ಬಿಟ್ಟ ವೇಳೆ ಬಂಗಾರದೊಡ್ಡಿ ಅಣೆಯ ಬಳಿ ನದಿಯಲ್ಲಿದ್ದ ಯುವಕನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ನದಿಯ ಮಧ್ಯೆ ಸಿಲುಕಿದ್ದ ಮತ್ತೊಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

ನದಿಯ ಮಧ್ಯೆ ಸಿಲುಕಿದ್ದ ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ಮಹದೇವು (35) ಅವರನ್ನು ರಕ್ಷಿಸಲಾಗಿದೆ. ಏಕಾಂಗಿಯಾಗಿ ವಿಹಾರಕ್ಕೆ ಬಂದಿದ್ದು, ನದಿಗೆ ಇಳಿದಿದ್ದ ವೇಳೆ ದಿಢೀರ್‌ ಪ್ರವಾಹ ಬಂದಿದೆ. ಸುಮಾರು ಒಂದು ತಾಸು ನದಿಯ ಮಧ್ಯೆ ಜೊಂಡು ಹಿಡಿದೇ ನಿಂತಿದ್ದರು. ಈಚೆಗೆ ಬರಲು ಪರದಾಡುತ್ತಿದ್ದನ್ನು ನೋಡಿದ ಈಜುಗಾರರು ಹಗ್ಗದ ಸಹಾಯದಿಂದ ರಕ್ಷಿಸಿ ದಡಕ್ಕೆ ಕರೆತಂದರು. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ರಕ್ಷಣಾ ಕಾರ್ಯಕ್ಕೆ ನೆರವಾದರು.

ಕೊಚ್ಚಿ ಹೋದ ಅಪರಿಚಿತ: ಮಹದೇವು ನದಿಯಲ್ಲಿ ಸಿಲುಕಿದ್ದ ಸ್ಥಳಕ್ಕೆ ಹತ್ತಿರದಲ್ಲೇ ಮತ್ತೊಬ್ಬ ವ್ಯಕ್ತಿ ನದಿಯಲ್ಲಿದ್ದರು. ನೀರಿನ ಸೆಳೆತಕ್ಕೆ ಕೊಚ್ಚಿ ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಸ್ಥಳದಲ್ಲಿ ಒಂದು ಅಪರಿಚಿತ ಬೈಕ್‌ ಸಿಕ್ಕಿದೆ. ಕೆಎ– 55, ಎಸ್‌–3803 ನೋಂದಣಿ ಸಂಖ್ಯೆಯ ಹೀರೊ ಹೋಂಡಾ ಶೈನ್‌ ಬೈಕ್‌ ಬಂಗಾರದೊಡ್ಡಿ ನಾಲೆಯ ಮಗ್ಗುಲಲ್ಲಿ ನಿಂತಿದೆ. ಬೈಕ್‌ ಮಾಲೀಕರನ್ನು ಹುಡುಕಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಾಂಶಗಳು

* ಆಗುಂಬೆ ಸೂರ್ಯಾಸ್ತ ವೀಕ್ಷಣೆ ಗೋಪುರದ ಬಳಿ ಗುಡ್ಡ ಕುಸಿತ

* ಆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ, ಮುನ್ನೆಚ್ಚರಿಕೆ ಕ್ರಮ

* ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬೀಸನಗದ್ದೆ ಗ್ರಾಮ ಸಂಪೂರ್ಣವಾಗಿ ಜಲಾವೃತ, ಹೊರ ಜಗತ್ತಿನ ಸಂಪರ್ಕ ಕಡಿತ

* ಸಕಲೇಶಪುರ ತಾಲ್ಲೂಕಿನಲ್ಲಿ ಧರೆಗುರುಳಿದ ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌, ಮರ

* ವಿದ್ಯುತ್‌ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಮುಳುಗಿದ ಸಕಲೇಶಪುರ ತಾಲ್ಲೂಕಿನ ಗ್ರಾಮಗಳು

* ಉಪ್ಪಿನಂಗಡಿ–ಸುಬ್ರಹ್ಮಣ್ಯ ರಸ್ತೆಯ ಹೊಸ್ಮಠ ಸೇತುವೆ 6 ನೇ ದಿನವೂ ಮುಳುಗಡೆ

* ತುಂಗಾ ಜಲಾಶಯದಿಂದ 53 ಸಾವಿರ ಕ್ಯೂಸೆಕ್‌ ನೀರು

* ಜಲಾವೃತಗೊಂಡಿರುವ ಚಿಕ್ಕೋಡಿ ತಾಲ್ಲೂಕಿನ ಆರು ಸೇತುವೆ ಯಥಾಸ್ಥಿತಿ

ನೀರು ಬೀಳುವ ಸ್ಥಳದಲ್ಲಿ ಮೇಲೇಳುವ ನೀರಿನ ಹಬೆ ನೋಡುತ್ತಿರುವ ಸ್ಥಳೀಯರು.
ಉಳ್ಳಾಲದ ಪೆರಿಬೈಲಿನಲ್ಲಿ ಆಗಿರುವ ಕಡಲ್ಕೊರೆತ
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ವರದಾ ನದಿಗೆ ಪ್ರವಾಹ ಬಂದಿರುವುದರಿಂದ ಅಜ್ಜರಣಿಗೆ ತೆರಳುವ ಜನರು ತೆಪ್ಪದಲ್ಲಿ ಸಂಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.