ADVERTISEMENT

ಕ್ಷೇತ್ರ ಪರಿಚಯ–ಚಾಮರಾಜನಗರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 0:22 IST
Last Updated 3 ಏಪ್ರಿಲ್ 2024, 0:22 IST
   

ನಂಜುಂಡೇಶ್ವರನ ನಂಜನಗೂಡಿನ ಜತೆಗೆ ಮಲೆ ಮಹದೇಶ್ವರನ ತಪ್ಪಲು–ಒಕ್ಕಲು, ‘ಪವಾಡ’ ತೋರಿದನೆಂಬ ನಂಬುಗೆಯಿರುವ ಮಂಟೇಸ್ವಾಮಿ ಸನ್ನಿಧಿ... ಇವೆಲ್ಲದರ ಜತೆಗೆ ಬಹುಕಾಲದಿಂದಲೂ ಶ್ರೀನಿವಾಸ್ ಪ್ರಸಾದ್ ಪ್ರಭಾವ ವಲಯದಲ್ಲಿರುವ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ‘ವರುಣ’ ಕ್ಷೇತ್ರವನ್ನೂ ಚಾಚಿಕೊಂಡ ಚಾಮರಾಜನಗರದ ಚುನಾವಣೆಯಲ್ಲಿ ಯಾರಿಗೆ ಯಾರು ಹಿತವರು ಎಂಬ ಪ್ರಶ್ನೆ ಎದುರಾಗಿದೆ. ನೀವೇ ನಿಲ್ಲಿ ಎಂದರೂ ಒಲ್ಲೆ ಎಂದ ಸಚಿವ ಎಚ್.ಸಿ. ಮಹದೇವಪ್ಪ, ಹಟ ಬಿದ್ದು ತಮ್ಮ ಮಗ ಸುನಿಲ್ ಬೋಸ್‌ಗೆ ಟಿಕೆಟ್ ಕೊಡಿಸಿದ್ದಾರೆ. ಶಾಸಕರನ್ನು ಒಪ್ಪಿಸಿಕೊಳ್ಳುವ ಹೊಣೆ ಅವರ ಹೆಗಲಿಗೆ ಬಿದ್ದಿದೆ.

ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್‌ ಪ್ರಭಾವ ಇರುವ ಕ್ಷೇತ್ರದಲ್ಲಿ ಅವರ ಕುಟುಂಬ ಟಿಕೆಟ್ ಕೇಳಿತ್ತು. ಬಿಜೆಪಿಯು ಮಾಜಿ ಶಾಸಕ ಬಾಲರಾಜ್ ಅವರನ್ನು ಕಣಕ್ಕೆ ದೂಡಿದೆ. ತಾವು ಪ್ರತಿನಿಧಿಸುವ ಕ್ಷೇತ್ರವನ್ನು ಒಳಗೊಂಡ ಚಾಮರಾಜನಗರದಲ್ಲಿ ಗೆಲ್ಲುವುದು ಸಿದ್ದರಾಮಯ್ಯಗೂ ಸವಾಲು. ಮಹದೇವಪ್ಪಗೂ ಪ್ರತಿಷ್ಠೆಯೇ ಪಣ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದರೂ ಲಿಂಗಾಯತ ಮತಗಳೂ ನಿರ್ಣಾಯಕ. ಯಡಿಯೂರಪ್ಪ ತಮ್ಮ ಸ್ವಕ್ಷೇತ್ರ ಹಾಗೂ ಉಳಿದ 26 ಕ್ಷೇತ್ರಗಳಲ್ಲಿ ಓಡಾಡಬೇಕಾಗಿರುವುದರಿಂದ ಚಾಮರಾಜನಗರದ ಮೇಲೆಯೇ ಗಮನ ಹರಿಸುವುದು ಕಷ್ಟ. ಲಿಂಗಾಯತ ಮತಗಳನ್ನು ನೆಚ್ಚಿಕೊಂಡವರನ್ನು ‘ಮಹದೇಶ್ವರ’ ಲೋಕಸಭೆಯ ಬೆಟ್ಟ ಹತ್ತಿಸುತ್ತಾನೋ, ಹೆಸರಿನಲ್ಲೇ ಮಹದೇವ ಎಂದಿಟ್ಟುಕೊಂಡಿರುವ ಸುನಿಲ್ ಬೋಸ್‌, ದೆಹಲಿಗೆ ದೌಡಾಯಿಸುತ್ತಾರೋ... ಕುತೂಹಲ ಭಾರಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT