ADVERTISEMENT

LS Polls 2024 | ‘ಸಬ್ ಕಾ ಸಾಥ್ ಸಬ್ ಕೋ ಸಾಲ’– ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 18:27 IST
Last Updated 4 ಏಪ್ರಿಲ್ 2024, 18:27 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ‘2014ರಲ್ಲಿ ಕೇವಲ ₹55 ಲಕ್ಷ ಕೋಟಿಯಷ್ಟಿದ್ದ ದೇಶದ ಸಾಲ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 183.67 ಲಕ್ಷ ಕೋಟಿಗೆ ತಲುಪಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷಗಳಲ್ಲಿ ₹ 123 ಲಕ್ಷ ಕೋಟಿ ಸಾಲ ಮಾಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರದ ಸಾಲದ ಕುರಿತು ಕೆಣಕಿದ ವಿರೋಧ ‍ಪಕ್ಷದ ನಾಯಕ ಆರ್. ಅಶೋಕ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ‘ಅಶೋಕ ಅವರೇ, ಯಾಕೆ ನಮ್ಮ ಕೈಯಲ್ಲಿ ಬಡಿಗೆ ಕೊಟ್ಟು ಬಡಿಸಿಕೊಳ್ಳುತ್ತೀರಿ? ರಾಜ್ಯ ಸರ್ಕಾರದ ಸಾಲದ ಲೆಕ್ಕ ಹೇಳಿದ್ದೀರಿ, ಮೋದಿ ನೇತೃತ್ವದ ನಿಮ್ಮದೇ ಪಕ್ಷದ ಸರ್ಕಾರದ ಸಾಲದ ಕತೆಯನ್ನು ಸ್ವಲ್ಪ ಹೇಳಿ ಬಿಡಿ. ನೀವು ಮರೆತಿದ್ದರೆ ನಾನು ಹೇಳುತ್ತೇನೆ ಕೇಳಿ’ ಎಂದು ಕುಟುಕಿದ್ದಾರೆ.

‘ಸದ್ಯ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ₹ 92 ಸಾವಿರ ಸಾಲದ ಹೊರೆ ಇದೆ. ಇದು ಮೋದಿ ಸರ್ಕಾರದ ಸಬ್ ಕಾ ಸಾಥ್ ಸಬ್ ಕೋ ಸಾಲ’ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

‘‌ರಾಜ್ಯ ಸರ್ಕಾರದ ಸಾಲ ‘ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ’ಯ (ಎಫ್‌ಆರ್‌ಬಿ) ವ್ಯಾಪ್ತಿಯಲ್ಲಿದೆ. ನಮ್ಮ ಒಟ್ಟು ಸಾಲ ₹ 1 ಲಕ್ಷ ಕೋಟಿ ಮೀರಿದ್ದರೂ, ಅದು ನಮ್ಮ ಜಿಎಸ್‌ಡಿಪಿಯ ಶೇ 25ರ ಮಿತಿಯ ಒಳಗಿದೆ. ನಮ್ಮ ಹಣಕಾಸು ಕೊರತೆ ಕೂಡಾ ಜಿಎಸ್‌ಡಿಪಿಯ ಶೇ 3 ಮೀರಿಲ್ಲ’ ಎಂದೂ ವಿವರಿಸಿದ್ದಾರೆ.

‘ಕೇಂದ್ರದ ಬಿಜೆಪಿ ಆಡಳಿತದಲ್ಲಿ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನರ ವೈಯಕ್ತಿಕ ಸಾಲ ಕೂಡಾ ಹೆಚ್ಚುತ್ತಿದೆ. ನಿರುದ್ಯೋಗದಿಂದಾಗಿ ಕುಟುಂಬದ ಆದಾಯ ಕುಸಿಯುತ್ತಿದೆ. ಹಾಗಿದ್ದರೆ, ಮೋದಿ ಸರ್ಕಾರದ ಸಾಲದ ಹಣ ಎಲ್ಲಿ ಸೋರಿಯಾಗುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.