ADVERTISEMENT

ಪ್ರಧಾನಿ ಮೋದಿ ಸುಳ್ಳುಗಳನ್ನು ಪಟ್ಟಿ ಮಾಡಿದ ಸಿದ್ದರಾಮಯ್ಯ: ನೀವೂ ಸೇರಿಸಿ ಎಂದ CM

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮೇ 2024, 14:14 IST
Last Updated 8 ಮೇ 2024, 14:14 IST
ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ
ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ ಸುಳ್ಳುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಿ ಮಾಡಿದ್ದಾರೆ.

ಹಲವು ಸುಳ್ಳುಗಳನ್ನು ಪಟ್ಟಿ ಮಾಡಿರುವ ಅವರು, ಹೆಚ್ಚುವರಿಯಾಗಿ ನಿಮಗೆ ನೆನಪಾದರೆ ಸೇರಿಸಿಕೊಳ್ಳಿ. ಈ ಸುಳ್ಳಿನ ಸರಮಾಲೆ ನಿಲ್ಲದು ಎಂದು ಎಕ್ಸ್‌ ತಾಣದಲ್ಲಿ ಬರೆದುಕೊಂಡಿದ್ದಾರೆ.

‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವ ಪ್ರಧಾನಮಂತ್ರಿಯೂ ಇಷ್ಟೊಂದು ನಿರ್ಲಜ್ಜವಾಗಿ ಈ ರೀತಿ ಹಸಿಹಸಿ ಸುಳ್ಳುಗಳನ್ನು ಹೇಳಿರಲಾರರು. ಯಾರೂ ಕೂಡಾ ಪ್ರಧಾನಮಂತ್ರಿ ಕುರ್ಚಿಯ ಘನತೆಯನ್ನು ಈ ರೀತಿ ಮಣ್ಣು ಪಾಲು ಮಾಡಿರಲಾರರು.

ADVERTISEMENT

ಮತದಾನದ ದಿನ ದೇಶದ ಜನರಿಗೆ ಸತ್ಯ-ಸುಳ್ಳುಗಳನ್ನು ಅರಿತುಕೊಳ್ಳುವ ಸದ್ಬುದ್ದಿಯನ್ನು ದೇವರು ಕರುಣಿಸಲಿ ಎಂದು ಬೇಡಿಕೊಳ್ಳುವೆ’ ಎಂದು ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಪಟ್ಟಿ ಮಾಡಿರುವ ಸುಳ್ಳುಗಳು ಹೀಗಿವೆ.

1. ಎಸ್‌ಸಿ/ಎಸ್‌ಟಿ, ಒಬಿಸಿ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.

2. ಸಂಪತ್ತಿನ ಸಮಾನ ಹಂಚಿಕೆಯ ನೆಪದಲ್ಲಿ ಕಾಂಗ್ರೆಸ್ ಪಕ್ಷ ಹಿಂದೂಗಳ ಆಸ್ತಿಯನ್ನು ಕಬಳಿಸಿ ಮುಸ್ಲಿಮರಿಗೆ ನೀಡಲಿದೆ.

3. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಸೇರಿದಂತೆ ಜನರ ಚಿನ್ನ, ಆಸ್ತಿಯನ್ನು ಕಿತ್ತುಕೊಂಡು ಹೆಚ್ಚು ಮಕ್ಕಳು ಇರುವವರಿಗೆ, ನುಸುಳುಕೋರರಿಗೆ (ಮುಸ್ಲಿಮರಿಗೆ) ನೀಡಲಿದೆ.

4. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಬಗ್ಗೆ ಸುಪ್ರಿಂ ಕೋರ್ಟ್‌ ನೀಡಿದ ತೀರ್ಪನ್ನು ಬದಲಾಯಿಸುತ್ತದೆ.

5. ದೇಶದ ಸಂಪತ್ತಿನ ಮೊದಲ ಹಕ್ಕು ಮುಸ್ಲಿಮರಿಗೆ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದರು.

6. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಜನರ ಪಿತ್ರಾರ್ಜಿತ ಆಸ್ತಿಗೆ ಶೇ.55ರಷ್ಟು ತೆರಿಗೆ ಹೇರಲಿದೆ.

7. ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮ, ಮೈಸೂರಿನ ದೊರೆಗಳನ್ನು ಕಾಂಗ್ರೆಸ್‌‌ನವರು ನಿಂದಿಸುತ್ತಾರೆ.

8. ಲೋಕಸಭಾ ಚುನಾವಣೆಯನ್ನು ವಿದೇಶಿ ಶಕ್ತಿಗಳು ನಿಯಂತ್ರಿಸುತ್ತಿವೆ.

9. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಉಗ್ರರಿಗೆ ಪ್ರಧಾನಮಂತ್ರಿಯವರ ನಿವಾಸದಲ್ಲಿ ಸ್ವಾಗತ ಕೋರಲಾಗಿತ್ತು.

10. 2008ರಲ್ಲಿ ಮುಂಬೈ ಪ್ರವೇಶಿಸಿದ ಹತ್ತು ಉಗ್ರರ ಜೊತೆಗೆ ಕಾಂಗ್ರೆಸ್‌ ಸಂಪರ್ಕ ಹೊಂದಿತ್ತು

11. ರಾಜ, ಮಹಾರಾಜರನ್ನು ಟೀಕಿಸುವ ಕಾಂಗ್ರೆಸ್‌ ನವಾಬರನ್ನು ಟೀಕಿಸುವುದಿಲ್ಲ.

12. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲರ ಮನೆ ಮನೆಗೂ ದಾಳಿ ನಡೆಸಿ ನೀವು ಕೂಡಿಟ್ಟ ಸಂಪತ್ತನ್ನು ವಶಪಡಿಸಿ, ಅದನ್ನು ತನ್ನ ವೋಟ್ ಬ್ಯಾಂಕ್‌ಗೆ (ಮುಸ್ಲಿಮರಿಗೆ) ಮರು ಹಂಚಿಕೆ ಮಾಡುತ್ತದೆ.

13. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕುತ್ತದೆ.

14. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತದ ಕ್ರಿಕೆಟ್ ತಂಡದಲ್ಲಿ ಬರೀ ಮುಸ್ಲಿಮರೇ ಇರುತ್ತಾರೆ.

15. ಕಳೆದ ಐದು ವರ್ಷಗಳಿಂದ ಅದಾನಿ-ಅಂಬಾನಿಗಳನ್ನು ಪ್ರಶ್ನೆ ಮಾಡುತ್ತಿದ್ದ ರಾಹುಲ್ ಗಾಂಧಿ ಏಕಾಏಕಿ ಪ್ರಶ್ನೆ ಮಾಡುವುದನ್ನು ನಿಲ್ಲಿಸಿದ್ದೇಕೆ? ಹಣ ತುಂಬಿದ ಟೆಂಪೋಗಳು ಕಾಂಗ್ರೆಸ್ ಮನೆಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.