ADVERTISEMENT

‘ಮೋದಿ ಔಷಧದ 'ಅವಧಿ' ಮುಗಿದಿದೆ’: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 16:13 IST
Last Updated 21 ಏಪ್ರಿಲ್ 2024, 16:13 IST
ರೇವಂತ್ ರೆಡ್ಡಿ
ರೇವಂತ್ ರೆಡ್ಡಿ   

ಬೆಂಗಳೂರು: ‘ಮೋದಿ ಎಂಬ ಔಷಧದ ಅವಧಿ (ಎಕ್ಸ್‌ಪೈರಿ ಡೇಟ್‌) ಮುಗಿದಿದೆ. ಹೀಗಾಗಿ, ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹೀನಾಯ ಸೋಲು ಕಾಣಲಿದೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅಭಿಪ್ರಾಯಪಟ್ಟರು.

ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ರಾಜ್ಯಕ್ಕೆ ಬಂದಿರುವ ಅವರು ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಅನೌಪಚಾರಿಕವಾಗಿ ಭಾನುವಾರ ಮಾತನಾಡಿದರು.

‘ಈ ಬಾರಿಯ ಚುನಾವಣೆಯಲ್ಲಿ ಮತದಾರರ ಮುಂದೆ ಹಲವು ವಿಚಾರಗಳಿವೆ. ಆದರೆ, ಇಡೀ ದೇಶದ ಜನತೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಮುಂದುವರೆಯಬೇಕೊ, ಬೇಡವೊ ಎಂಬ ಪ್ರಶ್ನೆಯನ್ನು ಮುಂದಿಟ್ಟು ಮತ ಚಲಾಯಿಸಲಿದ್ದಾರೆ’ ಎಂದರು.

ADVERTISEMENT

‘ವ್ಯವಸ್ಥೆಗಿಂತಲೂ ದೊಡ್ಡವನು ಎಂದು ಭಾವಿಸಿ ಯಾವ ವ್ಯಕ್ತಿ ತಾನು ಸರ್ವಾಧಿಕಾರ ಧೋರಣೆ ತೋರಿಸುತ್ತಾನೆಯೊ ಆಗ ಪ್ರಕೃತಿಯೇ ಆ ವ್ಯವಸ್ಥೆಯನ್ನು ಮರುಸ್ಥಾಪಿಸಲು ಮುಂದಾಗುತ್ತದೆ. ಇದು ಪ್ರಕೃತಿಯ ನಿಯಮ. ಪ್ರತಿಯೊಬ್ಬರ ಖಾಸಗಿ ಬದುಕಿನ ಮೇಲೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದಾಳಿ ಮಾಡುತ್ತಿದೆ. ವ್ಯಾಪಾರಿಯನ್ನು ಕಳ್ಳನಂತೆ, ರಾಜಕಾರಣಿಯನ್ನು ದರೋಡೆಕೋರನಂತೆ ನೋಡುತ್ತಿದೆ. ರೈತರು ಮತ್ತು ಮಾಧ್ಯಮಗಳನ್ನು ಶೋಷಿಸುತ್ತಿದೆ’ ಎಂದರು.

‘ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಲ್ಲ, ನಾಯಕತ್ವವೂ ಇಲ್ಲ. ನಾವೆಲ್ಲರೂ ಕೆಲಸ ಮಾಡಿಲ್ಲ ಎಂಬಂತಹ ಎಲ್ಲ ವಿಚಾರಗಳು ಪ್ರಕೃತಿ ನಿಯಮದ ಮುಂದೆ ಮರೆಗೆ ಸರಿಯಲಿವೆ. ಮೋದಿ ಭಾಷಣಕ್ಕೆ ಈಗ ಜನರು ಮರುಳಾಗುತ್ತಿಲ್ಲ. ಭಾಷಣ ಆಲಿಸಲು ಮುಂದಾಗುತ್ತಿಲ್ಲ. ಮೋದಿ ಜನಮನ್ನಣೆ ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿದ್ದ ಖಾಲಿ ಕುರ್ಚಿಗಳೇ ಸಾಕ್ಷಿ’ ಎಂದರು.

‘ಈ ದೇಶದಲ್ಲಿ ಸತತವಾಗಿ ಎರಡು ಬಾರಿ ಅಧಿಕಾರ ಹಿಡಿದವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ವಾಜಪೇಯಿ ಮತ್ತು ಮನಮೋಹನ್‌ ಸಿಂಗ್ ಅವರು ಎರಡು ಬಾರಿ ಪ್ರಧಾನಿಯಾಗಿದ್ದರು. ಬಳಿಕ ಅಧಿಕಾರ ಕಳೆದುಕೊಂಡರು. ಅದೇ ಸ್ಥಿತಿ ಮೋದಿಗೂ ಬರಲಿದೆ’ ಎಂದರು.

‘ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 220 ಸ್ಥಾನ ಪಡೆಯುವುದೇ ಹೆಚ್ಚು’ ಎಂದ ರೆಡ್ಡಿ, ‘ಲಕ್ಷದ್ವೀಪ ಸೇರಿದಂತೆ ದಕ್ಷಿಣದಲ್ಲಿ ಒಟ್ಟು 131 ಸ್ಥಾನಗಳಿವೆ. ಈ ಪೈಕಿ, ಕರ್ನಾಟಕದಲ್ಲಿ 13 ರಿಂದ 14 ಸೀಟುಗಳನ್ನು ಬಿಜೆಪಿ ಗೆಲ್ಲಬಹುದು. ತೆಲಂಗಾಣದಲ್ಲಿ ಮೂರರಿಂದ ನಾಲ್ಕು ಸೀಟು ಆ ಪಕ್ಷಕ್ಕೆ ಬಂದರೆ ಹೆಚ್ಚು. ಉಳಿದ ಕಡೆ ಬಿಜೆಪಿಗೆ ಅಸ್ತಿತ್ವವೇ ಇಲ್ಲ. ಅಂದರೆ, ಬಿಜೆಪಿ 20 ಸ್ಥಾನಗಳನ್ನು ಗೆಲ್ಲಬಹುದು’ ಎಂದರು.

‘ಈ ಬಾರಿ ಬಿಜೆಪಿ ಸೋಲಿಗೆ ಆ ಪಕ್ಷದ ಭಿನ್ನಮತವೇ ಮುಖ್ಯ ಕಾರಣವಾಗಲಿದೆ. ಆ ಪಕ್ಷದ ಪ್ರತಿಯೊಬ್ಬ ನಾಯಕ ಹಾಗೂ ಅಭ್ಯರ್ಥಿ ತಾನು ಗೆಲ್ಲಬೇಕು, ಪಕ್ಕದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಲಬೇಕು ಎಂದು ಕೆಲಸ ಮಾಡುತ್ತಿದ್ದಾನೆ. ಬಿಜೆಪಿಯ ಈ ಒಳಜಗಳ ಮೋದಿ ಅವರ ಸೋಲಿಗೆ ಕಾರಣ ಆಗಲಿದೆ’ ಎಂದು ವಿಶ್ಲೇಷಿಸಿದರು.

‘ಅಧಿಕಾರ ಹಂಚಿಕೆಯಲ್ಲೂ ದಕ್ಷಿಣಕ್ಕೆ ಅನ್ಯಾಯ’

  ‘ತೆರಿಗೆ ಹಂಚಿಕೆ ಜೊತೆಗೆ ಅಧಿಕಾರದಲ್ಲಿ ಪಾಲು ನೀಡುವ ವಿಷಯದಲ್ಲೂ ದಕ್ಷಿಣ ಭಾರತದ ಬಗ್ಗೆ ಮೋದಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ರೇವಂತ್ ರೆಡ್ಡಿ ಟೀಕಿಸಿದರು. ‘ಕರ್ನಾಟಕ ತೆಲಂಗಾಣ ರಾಸೇರಿದಂತೆ ದಕ್ಷಿಣ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗುವ ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರಧಾನಿ ಕಚೇರಿಯಿಂದಲೇ ದೂರವಾಣಿ ಕರೆ ಮಾಡಿ ಗುಜರಾತ್‌ನಲ್ಲೇ ಹೂಡಿಕೆ ಮಾಡಲು ಒತ್ತಡ ಹಾಕಲಾಗಿತ್ತು’ ಎಂದೂ ದೂರಿದರು.

‘ಹಿಂದೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಪ್ರಧಾನಿ ಉತ್ತರ ಭಾರತೀಯವರಾದರೆ ರಾಷ್ಟ್ರಪತಿ ಹುದ್ದೆ ದಕ್ಷಿಣ ಭಾರತೀಯರಿಗೆ ಸಿಗುತ್ತಿತ್ತು. ರಕ್ಷಣೆ ವಿದೇಶಾಂಗ ವ್ಯವಹಾರ ಹಣಕಾಸು ಸೇರಿ 5–6 ಪ್ರಮುಖ ಖಾತೆಗಳಲ್ಲಿ ನಾಲ್ಕು ಉತ್ತರ ಭಾರತೀಯರಿಗೆ ಮೂರು ದಕ್ಷಿಣ ಭಾರತೀಯರಿಗೆ ಸಿಗುತ್ತಿತ್ತು. ಸ್ಪೀಕರ್ ಹುದ್ದೆ ಉತ್ತರ ಭಾರತೀಯರಿಗಾದರೇ ಉಪ ಸಭಾಧ್ಯಕ್ಷ ಹುದ್ದೆ ದಕ್ಷಿಣದವರಿಗೆ ಇರುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಕ್ಷಿಣ ಭಾರತೀಯರಿಗೆ ಸಿಕ್ಕಿರುವ ಅಧಿಕಾರದ ಪಾಲು ನೋಡಿದರೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ದಕ್ಷಿಣಕ್ಕೆ ಮಾಡಿರುವ ಅನ್ಯಾಯ ಗೊತ್ತಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.