ಬೆಂಗಳೂರು: ‘ದೆಹಲಿಯ ಲೀಲಾ ಪ್ಯಾಲೆಸ್‌ನಲ್ಲಿ 2013ರಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಯಾರನ್ನು ಭೇಟಿ ಮಾಡಿದ್ದರು ಎನ್ನುವುದನ್ನು 3–4 ದಿನಗಳಲ್ಲಿ ಬಹಿರಂಗಪಡಿಸುತ್ತೇನೆ’ ಎನ್ನುವ ಮೂಲಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಅವರಿಬ್ಬರೂ ಎರಡು ಬಾರಿ ಯಾರನ್ನು ಭೇಟಿ ಆಗಿದ್ದರು, ಏನು ಮಾತುಕತೆ ನಡೆದಿತ್ತು, ಮಾತುಕತೆ ಯಾಕೆ ವಿಫಲವಾಯಿತು ಎಂಬುದನ್ನೂ ಬಿಚ್ಚಿಡುತ್ತೇನೆ’ ಎಂದೂ ಹೇಳಿದರು.
ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ನಾನು ಇದನ್ನು ವಿಸ್ತಾರವಾಗಿ ಬಹಿರಂಗಪಡಿಸುತ್ತೇನೆ. ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ ನಾನು ಮಾಡುವುದಿಲ್ಲ. ನನ್ನದು ನಿಜ ಗುಂಡು. ನಾನು ಈ ವಿಷಯವನ್ನು ಇದೇ 7ರ ಒಳಗೆ ಬಹಿರಂಗಪಡಿಸುತ್ತೇನೆ. ಅಲ್ಲಿಯವರೆಗೆ ಕಾಯಿರಿ’ ಎಂದು ತಿಳಿಸಿದರು.
ಯಡಿಯೂರಪ್ಪ ಮತ್ತು ಶೋಭಾ ಅವರನ್ನು ಉದ್ದೇಶಿಸಿ ಮಾತನಾಡಿದ ಪಾಟೀಲರು, ‘ನೀವಿಬ್ಬರೂ ಎಲ್ಲ ಬಿಟ್ಟುಬಿಡಿ. ಬಿಜೆಪಿಯವರ ಷಡ್ಯಂತ್ರಕ್ಕೆ ಬಲಿ ಆಗಬೇಡಿ. ಈ ಬಾರಿ ಬಹಳ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ರಾಜ್ಯದ ಜನರು ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲಿದ್ದಾರೆ’ ಎಂದರು.
‘ಲಿಂಗಾಯತರ ವಿಷಯದಲ್ಲಿ ರಾಜ್ಯದ ಬಿಜೆಪಿ ನಾಯಕರು ಗಾಬರಿಗೊಂಡಿದ್ದಾರೆ. ಯಾವುದೇ ನಾಯಕನ ಮುಖ ಇಟ್ಟು ಜನರ ಬಳಿಗೆ ಹೋಗಲು ಅವರಿಗೆ ಆಗುತ್ತಿಲ್ಲ. ಮೋದಿ ಮತ್ತು ಶಾ ಕರ್ನಾಟಕದ ಶಾಶ್ವತ ನಿವಾಸಿಗಳಾಗಿ ಬಿಟ್ಟಿದ್ದಾರೆ. ಶೆಟ್ಟರ್ ಮತ್ತು ಸವದಿ ಅವರನ್ನು ಸೋಲಿಸಲು ಯಡಿಯೂರಪ್ಪ ಅವರನ್ನು ಬಿಟ್ಟಿದ್ದಾರೆ. ಸವದಿ, ಶೆಟ್ಟರ್ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದಾಗ ಅವರು ನೇರವಾಗಿ ಬಿಜೆಪಿ ಎದೆಗೆ ಚೂರಿ ಹಾಕಿದ್ದರು. ಯಡಿಯೂರಪ್ಪನವರಿಂದ ಕೆಟ್ಟ ಕೆಲಸ ಮಾಡಿಸಿದರು. ಕಣ್ಣೀರು ಹಾಕಿಸಿದರು. ಬಳಿಕ ಕಸದ ಬುಟ್ಟಿಗೆ ಎಸೆದಂತೆ ಎಸೆದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.