ADVERTISEMENT

ಚುನಾವಣೆ ಬಳಿಕ ಎಲ್ಲ ಕಡೆಯ ಶ್ರೀಗಳನ್ನು ಸೇರಿಸಿ ಚರ್ಚೆ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 8:12 IST
Last Updated 24 ಆಗಸ್ಟ್ 2022, 8:12 IST
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ   

ಬೆಂಗಳೂರು: ‘ಲಿಂಗಾಯತ ಸಮುದಾಯವನ್ನು ಕೂಡಿಸುವ ವಿಚಾರವನ್ನು ಮಾತ್ರ ನಾನು ಮಾತನಾಡುತ್ತೇನೆ. ನಾವು ಕೂಡುವುದು ಇಷ್ಟ ಇಲ್ಲವೇ? ಎಲ್ಲ ಲಿಂಗಾಯತ ಉಪಪಂಗಡಗಳಿಗೆ ಒಳ್ಳೆಯದಾಗಬೇಕು. ಚುನಾವಣೆ ನಂತರ ಎಲ್ಲ ಕಡೆಯ ಶ್ರೀಗಳನ್ನು ಸೇರಿಸಿ ಚರ್ಚೆ ಮಾಡುತ್ತೇವೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ರಂಭಾಪುರಿ ಶ್ರೀಗಳು ಮತ್ತು ಸಿದ್ದರಾಮಯ್ಯ ಅವರ ಭೇಟಿ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ’ ಎಂದರು.

‘ನಾನು ಕಲಬುರಗಿಯಿಂದ ರಾಜ್ಯ ಪ್ರವಾಸ ಆರಂಭಿಸಿದ್ದೇನೆ. ಪಕ್ಷದ ಕಾರ್ಯಕರ್ತರ, ಮುಖಂಡರ ಸಭೆ ನಡೆಸಿದ್ದೇನೆ. ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದರು.

ADVERTISEMENT

‘ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು. ಇದನ್ನು ಕೆಡಿಸಲಾಗುತ್ತಿದೆ. ಕರ್ನಾಟಕ ಮಾದರಿ ಬಿಟ್ಟು ಉತ್ತರ ಪ್ರದೇಶ ಮಾದರಿ ಎಂದು ಹೇಳುತ್ತಿದ್ದಾರೆ. ಉತ್ತರಪ್ರದೇಶ ರಾಜ್ಯ ಅಭಿವೃದ್ಧಿಯಲ್ಲಿ ಕಟ್ಟಕಡೆಯಲ್ಲಿತ್ತು. ನಮಗೆ ಅದರ ಮಾದರಿ ಬೇಕೇ‘ ಎಂದು ಪ್ರಶ್ನಿಸಿದರು.

‘ಹಲವು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಅವರ ಮೇಲೆ ಐಟಿ, ಇಡಿ ದಾಳಿ ನಡೆಯುತ್ತಿಲ್ಲ. ಬಿಜೆಪಿಯವರು ಹಿಜಾಬ್, ಆಜಾನ್ ತಂದು ವಾತಾವರಣ ಕೆಡಿಸಲು ಹೊರಟಿದ್ದಾರೆ. ಸರ್ಕಾರ ನಡೆಯುತ್ತಿಲ್ಲ, ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿಯವರೇ ಹೇಳಿಕೆ‌ ನೀಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಾಂಸ ತಿಂದ್ರೋ ಇಲ್ವೋ ಇದೆಲ್ಲಾ ವಿಷಯವೇ ಅಲ್ಲ. ಸಿದ್ದರಾಮಯ್ಯನವರೇ ಮಾಂಸ ತಿಂದಿಲ್ಲ ಎಂದು ಹೇಳಿದ ಮೇಲೆ ಆ ವಿಷಯ ಮುಗಿದು ಹೋಯಿತು. ತಿಂದೇ ಇಲ್ಲ ಅಂದ ಮೇಲೆ ಇನ್ನೇನು’ ಎಂದರು.

ಬಿಜೆಪಿಯಿಂದ ಸಾವರ್ಕರ್ ಭಾವಚಿತ್ರ ಬಳಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಾವರ್ಕರ್ ಭಾವಚಿತ್ರ ಬದಲು ಚೆನ್ನಮ್ಮನ ಫೋಟೊ ಇಡಲಿ. ಸುರಪುರ ನಾಯಕರ ಫೋಟೋ ಇಡಲಿ, ಕೆಂಪೇಗೌಡರ ಫೋಟೋ ಇಡಲಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವರು ಇದ್ದಾರೆ. ಅವರ ಫೋಟೋ ಇಟ್ಟು ಯಾತ್ರೆ ಮಾಡಲಿ. ಆದರೆ, ಬಿಜೆಪಿಯವರು ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ. ಇಂಥ ಕೆಲಸಗಳಿಂದಲೇ ಮುಂದಿನ ಚುನಾವಣೆಯಲ್ಲಿ ಸೋತು ಅವರು ಮನೆಗೆ ಹೋಗುತ್ತಾರೆ’ ಎಂದರು.

‘ರಾಜ್ಯಸಭಾ ಸದಸ್ಯರಾಗಿ ಜಗ್ಗೇಶ್‌ಗೆ ಇಷ್ಟೂ ಕೂಡ ಬುದ್ದಿ ಇಲ್ಲ. ಜಗ್ಗೇಶ್ ಅವರನ್ನು ಕಾನೂನು ಸುವ್ಯವಸ್ಥೆ ಉಲ್ಲಂಘನೆ ಅಡಿ ಅವರ ಮೇಲೆ ಕೇಸ್ ಹಾಕಿ ಬಂಧಿಸಬೇಕು. ಅವರೊಬ್ಬರನ್ನು ಬಂಧಿಸಿದರೆ ಉಳಿದವರಿಗೆ ಬುದ್ದಿ ಬರುತ್ತದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.