ADVERTISEMENT

ಡಾ.ಎಂ.ಚಿದಾನಂದಮೂರ್ತಿ: ಕನ್ನಡ ಅಸ್ಮಿತೆಯನ್ನು ಎಡೆಬಿಡದೆ ಹುಡುಕಿದ್ದ ವಿದ್ವಾಂಸ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 2:50 IST
Last Updated 11 ಜನವರಿ 2020, 2:50 IST
ಡಾ. ಎಂ.ಚಿದಾನಂದಮೂರ್ತಿ
ಡಾ. ಎಂ.ಚಿದಾನಂದಮೂರ್ತಿ   

ಇಂದು ನಿಧನರಾದ ಹಿರಿಯ ಸಂಶೋಧಕ, ವಿದ್ವಾಂಸ, ಬರಹಗಾರ ಡಾ. ಎಂ.ಚಿದಾನಂದಮೂರ್ತಿ ಅವರ ಬಾಲ್ಯ, ಶಿಕ್ಷಣ, ಸಾಹಿತ್ಯ–ಸಂಶೋಧನಾ ಕ್ಷೇತ್ರದ ಇಣುಕುನೋಟ:

1931ರ ಮೇ 10ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದ್ದ ಡಾ. ಎಂ.ಚಿದಾನಂದಮೂರ್ತಿ ಅವರು‌‌ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕೋಗಲೂರು, ಸಂತೆಬೆನ್ನೂರಿನಲ್ಲಿ ಪಡೆದಿದ್ದರು. ಇಂಟರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ ಸ್ಥಾನಗಳಿಸಿದ್ದ ಅವರು, ಕನ್ನಡ ಆನರ್ಸ್ ಸೇರಿ 1953ರಲ್ಲಿ ಆಲ್ ಆನರ್ಸ್ ಚಿನ್ನದ ಪದಕ ಪಡೆದಿದ್ದರು.

ಬಳಿಕ ಎರಡು ವರ್ಷ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದಿದ್ದರು.

ADVERTISEMENT

‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ 1964ರಲ್ಲಿ ಪಿ.ಎಚ್‌ಡಿ ಪದವಿ ಪಡೆದಿದ್ದರು.

ವೃತ್ತಿಜೀವನದ ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. 1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕರಾದರು. 1968ರವರೆಗೆ ಅಲ್ಲಿ ಪ್ರಾಧ್ಯಾಪಕರಾಗಿದ್ದರು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯ ಸೇರಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. 1990ರ ಅಕ್ಟೋಬರ್ 10ರಂದು ಸ್ವಯಂ ನಿವೃತ್ತಿ ಪಡೆದಿದ್ದರು.

ವೀರಶೈವ ಧರ್ಮ, ವಾಗರ್ಥ, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಪುರಾಣ ಸೂರ್ಯಗ್ರಹಣ ಸೇರಿ ಅನೇಕ ಕೃತಿಗಳನ್ನು ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಚಿದಾನಂದಮೂರ್ತಿ ಭಾಜನರಾಗಿದ್ದರು.

ಹಂಪಿ ಕನ್ನಡ ವಿವಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ: ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆಂದು ಹೋರಾಟ ನಡೆಸಿದವರ ಪೈಕಿ ಚಿದಾನಂದಮೂರ್ತಿಯವರೂ ಪ್ರಮುಖರು. ಸುಮಾರು 1985ರ ಸಂದರ್ಭದಲ್ಲಿ ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವಸಂಪುಟ, ಶಾಸಕರ ಮೇಲೆ ಒತ್ತಡ ತಂದು ವಿಶ್ವವಿದ್ಯಾಲಯ ಸ್ಥಾಪನೆಗೆ ಓಡಾಡಿದ್ದರು.

ಸಮಾಜಸೇವೆಯಲ್ಲೂ ಮುಂದಿದ್ದರು: ಸಂಶೋಧನೆ, ಸಾಹಿತ್ಯ ಸೇವೆ ಜತೆ ಸಮಾಜಸೇವೆಯಲ್ಲೂ ಚಿದಾನಂದಮೂರ್ತಿ ಮುಂದಿದ್ದರು. ಬರ, ನೆರೆಯಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗಿದ್ದರು. ಉದಾಹರಣೆಗೆ, 2012ರಲ್ಲಿ ರಾಜ್ಯ ತೀವ್ರ ಎದುರಿಸಿದ್ದಾಗ ‘ಬರ ಪರಿಹಾರ ನಿಧಿ ಬಳಗ’ ಸ್ಥಾಪಿಸಿ ನೆರವಾಗಿದ್ದರು. ತೀವ್ರ ಬರಪೀಡಿತ ಪ್ರದೇಶಗಳಿಗೆ ಹೋಗಿ ಮೇವು ಧಾನ್ಯ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.