ADVERTISEMENT

ಮಾಡಾಳ್ ವಿರುದ್ಧ ದೂರು ಕೊಟ್ಟಿದ್ದಕ್ಕೆ ಜೀವ ಬೆದರಿಕೆ: ಜಿ.ಆರ್. ಶಿವಶಂಕರ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 2:23 IST
Last Updated 7 ಏಪ್ರಿಲ್ 2023, 2:23 IST
ಕೆ.ಮಾಡಾಳ್ ವಿರೂಪಾಕ್ಷಪ್ಪ
ಕೆ.ಮಾಡಾಳ್ ವಿರೂಪಾಕ್ಷಪ್ಪ   

ಬೆಂಗಳೂರು: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಅಕ್ರಮಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕಾಗಿ ನನಗೆ ಜೀವ ಬೆದರಿಕೆಯಿದೆ’ ಎಂದು ಜಿ.ಆರ್. ಶಿವಶಂಕರ್ ಅವರು ಮಾಗಡಿ ರಸ್ತೆ ಠಾಣೆಗೆ ದೂರು ನೀಡಿದ್ದಾರೆ.

‘ಬಸವೇಶ್ವರನಗರ ನಿವಾಸಿ ಶಿವಶಂಕರ್ ಅವರು ಏಪ್ರಿಲ್ 5ರಂದು ದೂರು ನೀಡಿದ್ದಾರೆ. ದೂರಿನ ಸಂಗತಿಗಳನ್ನು ಪರಿಶೀಲಿಸಿದಾಗ, ನೇರ ಪುರಾವೆಗಳು ಲಭ್ಯವಾಗಿಲ್ಲ. ಹೀಗಾಗಿ, ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ಮಾತ್ರ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದ ನಿರ್ದೇಶನದನ್ವಯ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ದೂರಿನ ವಿವರ: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಅಧ್ಯಕ್ಷ ಕೆ. ಮಾಡಾಳ್ ವಿರೂಪಾಕ್ಷಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್, ಪ್ರಧಾನ ವ್ಯವಸ್ಥಾಪಕ ಉಮಾಶಂಕರ್ ಅಪಾಲೆ ಹಾಗೂ ಇತರರ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೆ’ ಎಂದು ಶಿವಶಂಕರ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ದೂರು ನೀಡಿದರೆಂಬ ಕಾರಣಕ್ಕೆ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕೆಲವರು, ನನ್ನ ಹಾಗೂ ನನ್ನ ಮಗನನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ನೀಡಿ. ಯಾವುದೇ ಅನಾಹುತವಾದರೂ ಅದಕ್ಕೆ ಮಾಡಾಳ್ ವಿರೂಪಾಕ್ಷಪ್ಪ, ಮಹೇಶ್, ಉಮಾಶಂಕರ್ ಹಾಗೂ ಇತರರು ಕಾರಣ’ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.