ADVERTISEMENT

ಮದರಸಾ ಶಿಕ್ಷಣ ಎಸ್ಸೆಸ್ಸೆಲ್ಸಿಗೆ ತತ್ಸಮಾನ: ಸರ್ಕಾರ ಚಿಂತನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 11:01 IST
Last Updated 6 ಜನವರಿ 2021, 11:01 IST
ಶ್ರೀಮಂತ ಪಾಟೀಲ
ಶ್ರೀಮಂತ ಪಾಟೀಲ   

ಬೆಂಗಳೂರು: ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜತೆಗೆ ಆಧುನಿಕ ಶಿಕ್ಷಣವನ್ನು ನೀಡುವ ಮೂಲಕ ಎಸ್ಸೆಸ್ಸೆಲ್ಸಿಗೆ ತತ್ಸಮಾನ ಎಂದು ಪರಿಗಣಿಸಲು ಚಿಂತನೆ ನಡೆಸಿರುವುದಾಗಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ತಿಳಿಸಿದ್ದಾರೆ.

ಮುಖ್ಯವಾಗಿ, ಇಂಗ್ಲಿಷ್‌, ವಿಜ್ಞಾನ ಮತ್ತು ಗಣಿತದ ಪಠ್ಯವನ್ನು ಬೋಧಿಸಲಾಗುವುದು. ಅಲ್ಲಿ ಕಲಿತು ಹೊರಬರುವಾಗ ಐಟಿಐನಂತಹ ಕೌಶಲ ಆಧರಿತ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಎಂದು ಅವರು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ವಿವರಿಸಿದರು.

ಮುಸ್ಲಿಂ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಮತ್ತು ಉದ್ಯೋಗ ಆಧಾರಿತ ಶಿಕ್ಷಣ ನೀಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ಸುಮಾರು 800 ಕ್ಕೂ ಹೆಚ್ಚು ಮದರಸಾಗಳಿವೆ. ಆಧುನಿಕ ಶಿಕ್ಷಣ ಯಾವ ರೀತಿಯಲ್ಲಿ ಜಾರಿಗೊಳಿಸಬೇಕು ಎಂಬ ಚರ್ಚೆ ನಡೆದಿದೆ. ಕೇಂದ್ರ ಸರ್ಕಾರ ಕೂಡ ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮಬಂಗಾಳಗಳಲ್ಲಿರುವ ಮದರಸಾಗಳಲ್ಲಿ ಆಧುನಿಕ ಶಿಕ್ಷಣ ಮತ್ತು ಡಿಪ್ಲೊಮೊ ಆರಂಭಿಸಲು ಉದ್ದೇಶಿಸಿದ್ದು, ಇದರ ಸಲುವಾಗಿ ಮಂಡಳಿಯನ್ನು ರಚಿಸುವ ಚಿಂತನೆ ಹೊಂದಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಅನುದಾನ ಕಡಿತ:ಕೋವಿಡ್‌ ಕಾರಣ ಇತರ ಎಲ್ಲ ಇಲಾಖೆಗಳಂತೆ ನಮ್ಮ ಇಲಾಖೆಗೂ ಅನುದಾನ ಕಡಿತ ಆಗಿದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ರದ್ದುಪಡಿಸಿದ್ದೇವೆ. ಶಾದಿಮಹಲ್‌ ಯೋಜನೆಗೂ ತಡೆ ನೀಡಲಾಗಿದೆ ಎಂದು ಶ್ರೀಮಂತ ಪಾಟೀಲ ಹೇಳಿದರು.

ಸಂಪುಟದಿಂದ ನನ್ನನ್ನು ಕೈಬಿಡುತ್ತಾರೆ ಎಂಬುದರಲ್ಲಿ ಹುರುಳಿಲ್ಲ. ನಮ್ಮ ಜತೆಯಲ್ಲಿ ಕಾಂಗ್ರೆಸ್–ಜೆಡಿಎಸ್‌ ಬಿಟ್ಟು ಬಂದವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.