ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಜಲವಿದ್ಯುತ್ ಯೋಜನೆಗಳು ಮತ್ತು ನೀರಾವರಿ ಯೋಜನೆಗಳ ಸಂತ್ರಸ್ತರ ಪುನರ್‌ವಸತಿ, ಭೂಮಿ ಸಮಸ್ಯೆ ಹಾಗೂ ಇತರೆ ಭೂ ಹಕ್ಕಿನ ಸಮಸ್ಯೆಗಳ ಪರಿಹಾರಕ್ಕಾಗಿ ಹಿರಿಯ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲು ಕ್ರಮವಹಿಸಿ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಲಹೆ ನೀಡಿದರು.
ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರು, ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಸಂತ್ರಸ್ತರು ಹಾಗೂ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1978 ಗಿಂತಲೂ ಮೊದಲು ಸಾಗುವಳಿ ಮಾಡುತ್ತಿದ್ದ ರೈತರಿಗೆ ಮೂರು ಎಕರೆ ಭೂಮಿ ಸಕ್ರಮಗೊಳಿಸಬೇಕು. ಈ ವಿಷಯದಲ್ಲಿ ಕೈಬಿಟ್ಟಿರುವ ಪ್ರಕರಣಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದರು.
ವಿವಿಧ ಭೂ ಮಂಜೂರಾತಿ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಮಂಜೂರು ಮಾಡಲಾದ ರೈತರ ಸಾಗುವಳಿ ಭೂಮಿಗಳನ್ನು ಅರಣ್ಯ ಭೂಮಿ ಎಂದು ಇಂಡೀಕರಣ ಮಾಡುತ್ತಿರುವುದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ಸಚಿವರು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಅರಣ್ಯಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ 2011 ರ ವಿಶೇಷ ನ್ಯಾಯಾಲಯದಲ್ಲಿ ಹಾಗೂ ಉಪಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸುವ ಮೂಲಕ ರೈತರಿಗೆ ತೊಂದರೆ ಕೊಡಲಾಗುತ್ತಿದೆ ಎಂಬುದನ್ನು ಅವರು ಮುಖ್ಯಕಾರ್ಯದರ್ಶಿಯವರ ಗಮನಕ್ಕೆ ತಂದರು.
ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 04 ಅಡಿಯಲ್ಲಿ ಮೀಸಲು ಅರಣ್ಯ ಪ್ರಾಥಮಿಕ ಅಧಿಸೂಚನೆಯಿಂದ ರೈತರ ಹಿಡುವಳಿ ಭೂಮಿ, ಬಗರ್ ಹುಕುಂ ಭೂಮಿ ಹಾಗೂ ಜನವಸತಿ ಪ್ರದೇಶಗಳನ್ನು ಕೈಬಿಟ್ಟು ಸೆಕ್ಷನ್ 17 ರ ಅಡಿ ಅಂತಿಮ ಅಧಿಸೂಚನೆ ಹೊರಡಿಸಿ, ಭೂಮಿ ಹಾಗೂ ವಸತಿ ಹಕ್ಕನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಧು ಬಂಗಾರಪ್ಪ ಹೇಳಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಭೂಹಕ್ಕಿಗೆ ಸಂಬಂಧಿಸಿದಂತೆ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಇದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮವಹಿಸಬೇಕು ಎಂದೂ ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಜಿಲ್ಲೆಯ ರೈತ ಮುಖಂಡರಾದ ಬಿ.ಆರ್. ಜಯಂತ್, ತಿ.ನ.ಶ್ರೀನಿವಾಸ್, ಶ್ರೀಕರ್, ಬಿ.ಎ.ರಮೇಶ್ ಹೆಗ್ಡೆ, ದಿನೇಶ್ ಶಿರವಾಳ, ಧರ್ಮಪ್ಪ, ದೂಗೂರು ಪರಮೇಶ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.