ADVERTISEMENT

ಮಹದಾಯಿ: ವನ್ಯಜೀವಿ ಅನುಮೋದನೆಗೆ ಮತ್ತೆ ನೆಪ

ಎನ್‌ಟಿಸಿಎ ಲಿಖಿತ ಅಭಿಪ್ರಾಯ ಕೇಳಿದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ

ಮಂಜುನಾಥ್ ಹೆಬ್ಬಾರ್‌
Published 16 ಅಕ್ಟೋಬರ್ 2024, 5:45 IST
Last Updated 16 ಅಕ್ಟೋಬರ್ 2024, 5:45 IST
<div class="paragraphs"><p>ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ &nbsp;(ಸಂಗ್ರಹ ಚಿತ್ರ)</p></div>

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ  (ಸಂಗ್ರಹ ಚಿತ್ರ)

   

ನವದೆಹಲಿ: ಮಹದಾಯಿ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವ ಪ್ರಸ್ತಾವನೆಯ ಕಾರ್ಯಸೂಚಿಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಮತ್ತೆ ಮುಂದೂಡಿದೆ. ಈ ಯೋಜನೆ ಬಗ್ಗೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿ) ನಿರ್ದೇಶನ ನೀಡಿದೆ. ಇದರಿಂದಾಗಿ, ವನ್ಯಜೀವಿ ಅನುಮೋದನೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ. 

ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್‌ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 9ರಂದು ನಡೆದ ಸ್ಥಾಯಿ ಸಮಿತಿಯ 80ನೇ ಸಭೆಯಲ್ಲಿ ಪ್ರಸ್ತಾವನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಕರ್ನಾಟಕ, ಗೋವಾ ಸರ್ಕಾರ ಹಾಗೂ ಎನ್‌ಟಿಸಿಎ ಅಧಿಕಾರಿಗಳ ಅಭಿಪ್ರಾಯ ಆಲಿಸಿದ ಬಳಿಕ ಕಾರ್ಯಸೂಚಿ ಮುಂದೂಡಲು ಸಮಿತಿ ನಿರ್ಧರಿಸಿತು. ಜತೆಗೆ, ಕಾನೂನಾತ್ಮಕ ಹಾಗೂ ಯೋಜನೆಯ ವಾಸ್ತವಾಂಶದ ವಿಷಯಗಳನ್ನು ಒಳಗೊಂಡ ಲಿಖಿತ ಅಭಿಪ್ರಾಯವನ್ನು ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸ್ಥಾಯಿ ಸಮಿತಿ ಸೂಚಿಸಿತು. ಸಭೆಯ ನಡಾವಳಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ADVERTISEMENT

ಫೆಬ್ರುವರಿ 22ರಂದು ನಡೆದ 78ನೇ ಹಾಗೂ ಜುಲೈ 31ರಂದು ನಡೆದ 79ನೇ ಸಭೆಯಲ್ಲೂ ಕಳಸಾ ಕಾರ್ಯಸೂಚಿ ಮುಂದೂಡಲಾಗಿತ್ತು. ಸಾಮಾನ್ಯವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಾಯಿ ಸಮಿತಿ ಸಭೆ ನಡೆಯುತ್ತದೆ. 

ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 10.68 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲಾಗುತ್ತದೆ. 

ತಜ್ಞರ ವರದಿ ಒಪ್ಪಿಕೊಂಡ ಎನ್‌ಟಿಸಿಎ: 

ಕಳಸಾ ನಾಲಾ ತಿರುವು ಯೋಜನೆ ಕೈ‌ಗೆತ್ತಿಕೊಳ್ಳದಂತೆ ಗೋವಾ ಸರ್ಕಾರದ ಪ್ರಧಾನ ಮುಖ್ಯ ವನ್ಯಜೀವಿ ವಾರ್ಡನ್‌ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ನಡುವೆ, ಯೋಜನೆ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ಎನ್‌ಟಿಸಿಎ ರಚಿಸಿತ್ತು. ಯೋಜನೆ ಅನುಷ್ಠಾನ ಮಾಡಬಹುದು ಎಂದು ತಜ್ಞರ ತಂಡ ಶಿಫಾರಸು ಮಾಡಿತ್ತು. ಆದಾಗ್ಯೂ, ಗೋವಾದ ಪ್ರಧಾನ ಮುಖ್ಯ ವನ್ಯಜೀವಿ ವಾರ್ಡನ್‌ ಆದೇಶವನ್ನು ಉಲ್ಲೇಖಿಸಿ ಎನ್‌ಟಿಸಿಎ ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. 

ಕರ್ನಾಟಕ ಹಾಗೂ ಗೋವಾದ ನಡುವೆ ನೀರು ಹಂಚಿಕೆಗೆ ಸಂಬಂಧಿಸಿದ ವಿಷಯ ಇದಾಗಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್‌ ಮುಂದಿದೆ. ಈ ಎಲ್ಲ ಸಂಗತಿಗಳನ್ನು ಸ್ಥಾಯಿ ಸಮಿತಿ ಪರಿಗಣನೆಗೆ ತೆಗೆದುಕೊಳ್ಳುವುದು ಸೂಕ್ತ ಎಂದು ಎನ್‌ಟಿಸಿಎ ಅಧಿಕಾರಿಗಳು ಸಭೆಯಲ್ಲಿ ಸಲಹೆ ನೀಡಿದರು. 

ಈ ವಿಷಯದ ಬಗ್ಗೆ 79ನೇ ಸಭೆಯಲ್ಲೂ ಚರ್ಚಿಸಲಾಗಿತ್ತು. ನ್ಯಾಯಿಕ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶ (ಸಬ್‌ ಜ್ಯುಡಿಸಿ) ಆಗುತ್ತದೆ ಎಂಬ ಕಾರಣಕ್ಕೆ ಕಾರ್ಯಸೂಚಿಯನ್ನು ಮುಂದೂಡಲಾಗಿತ್ತು ಎಂದು ಸಭೆಯ ಗಮನಕ್ಕೆ ತರಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.