ನವದೆಹಲಿ: ಮಹದಾಯಿ ಯೋಜನೆಯ ಭಾಗವಾದ ಬಂಡೂರಿ ನಾಲಾ ತಿರುವು ಯೋಜನೆಗೆ 28.44 ಹೆಕ್ಟೇರ್ ಅರಣ್ಯ ಬಳಕೆಗೆ ಅನುಮೋದನೆ ಕೋರಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಮತ್ತೆ ಪ್ರಸ್ತಾವ ಸಲ್ಲಿಸಿದೆ. ಈ ಯೋಜನೆಯಿಂದಾಗಿ 10,212 ಮರಗಳಿಗೆ ಕುತ್ತು ಉಂಟಾಗಲಿದೆ.
ಮಹದಾಯಿ ಜಲವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್ 14ರಂದು ಕಳಸಾ– ಬಂಡೂರಿ ಯೋಜನೆಗೆ 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿದೆ. ಇದರಲ್ಲಿ ಬಂಡೂರಿ ನಾಲಾ ತಿರುವು ಯೋಜನೆಗೆ 2.18 ಟಿಎಂಸಿ ಅಡಿ ಮೀಸಲಿಡಲಾಗಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮೂರು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್ ನಿರ್ಮಾಣ, ಪಂಪ್ ಹೌಸ್, ಎಲೆಕ್ಟ್ರಿಕಲ್ ಸಬ್ ಸ್ಟೇಷನ್, ಪೈಪ್‌ಲೈನ್‌ಗೆ) ಒಪ್ಪಿಗೆ ನೀಡಬೇಕು ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರು ಪ್ರಸ್ತಾವನೆಯಲ್ಲಿ ಕೋರಿದ್ದಾರೆ.
ಪ್ರಸ್ತಾವಿತ ಯೋಜನಾ ಸ್ಥಳಕ್ಕೆ ಬೆಳಗಾವಿ ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಫೆಬ್ರುವರಿಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಈ ಪ್ರದೇಶದ ಸುತ್ತ ಹುಲಿ, ಚಿರತೆ, ಕರಡಿ, ಕಾಡುಕೋಣ, ಜಿಂಕೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ಕಂಡುಬಂದಿವೆ. ಈ ಪ್ರದೇಶವು ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ಹುಲಿ ಸಂರಕ್ಷಿತ ಪ್ರದೇಶ ಹಾಗೂ ಆನೆ ಕಾರಿಡಾರ್‌ನ ಭಾಗ ಅಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅಧಿಸೂಚಿಸಿದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೂ ಈ ಪ್ರದೇಶ ಬರುವುದಿಲ್ಲ. ಈ ಯೋಜನೆಯ ಅನುಷ್ಠಾನದಿಂದ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಉಲ್ಲಂಘನೆ ಆಗುವುದಿಲ್ಲ. ಕುಡಿಯುವ ನೀರು ಒದಗಿಸುವ ಉದ್ದೇಶದ ಈ ಯೋಜನೆಗಾಗಿ ಕನಿಷ್ಠ ಪ್ರಮಾಣದ ಅರಣ್ಯ ಬಳಕೆ ಮಾಡಲಾಗುತ್ತದೆ ಎಂದು ರಾಜ್ಯ ಸ್ಪಷ್ಟಪಡಿಸಿದೆ.
ಪರಿಹಾರಾತ್ಮಕ ಅರಣ್ಯೀಕರಣ ಯೋಜನೆಗಾಗಿ 31 ಹೆಕ್ಟೇರ್ ಅರಣ್ಯೇತರ ಪ್ರದೇಶ ಗುರುತಿಸಿ ಯೋಜನೆ ಸಿದ್ಧಪಡಿಸಲಾಗಿದೆ ಎಂದೂ ರಾಜ್ಯ ಸರ್ಕಾರ ಹೇಳಿದೆ.
ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆಯನ್ನೂ ಪಡೆಯಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವಕ್ಕೆ ಅನುಮೋದನೆ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರಾಕರಿಸಿದೆ.
‘ಕಳಸಾ-ಬಂಡೂರಿ ಯೋಜನೆ ಅನುಷ್ಠಾನವಾದರೆ ಮಹದಾಯಿ ಕಣಿವೆಯ ಜೀವವೈವಿಧ್ಯ ನಾಶವಾಗಲಿದೆ. ಯೋಜನೆ ಹೆಸರಿನಲ್ಲಿ ವನ್ಯಜೀವಿಗಳ ಹಿತಾಸಕ್ತಿ ಬಲಿಕೊಡುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಬೆಳಗಾವಿಯ ಹೋರಾಟಗಾರ ರಾಘವೇಂದ್ರ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.