ADVERTISEMENT

ಮಹದಾಯಿಗೆ ಗೋವಾ ತಗಾದೆ: ರಾಜ್ಯ ಸರ್ಕಾರ ತೀವ್ರ ಆಕ್ಷೇಪ

ವನ್ಯಜೀವಿ ಅನುಮೋದನೆ ನೀಡುವಂತೆ ವನ್ಯಜೀವಿ ಮಂಡಳಿಗೆ ರಾಜ್ಯ ಒತ್ತಡ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
<div class="paragraphs"><p>ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ &nbsp;(ಸಂಗ್ರಹ ಚಿತ್ರ)</p></div>

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ  (ಸಂಗ್ರಹ ಚಿತ್ರ)

   

ನವದೆಹಲಿ: ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಗೋವಾ ಸರ್ಕಾರ ಅನಗತ್ಯ ತಗಾದೆ ಎತ್ತುತ್ತಿದೆ ಎಂದು ಬಲವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ, ‘ಈ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸದೆ ಯೋಜನೆಗೆ ಕೂಡಲೇ ಅನುಮೋದನೆ ನೀಡಬೇಕು’ ಎಂದು ಆಗ್ರಹಿಸಿದೆ. 

ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್‌ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 80ನೇ ಸಭೆ ನವದೆಹಲಿಯಲ್ಲಿ ಬುಧವಾರ ನಡೆಯಿತು. ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವ ಪ್ರಸ್ತಾವನೆ ಕಾರ್ಯಸೂಚಿಯ ಪಟ್ಟಿಯಲ್ಲಿತ್ತು. ರಾಜ್ಯದ ವಾದವನ್ನು ಆಲಿಸಿದ ಸ್ಥಾಯಿ ಸಮಿತಿಯು, ‘ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿ. ಸಮಿತಿಯು ಪರಿಶೀಲನೆ ನಡೆಸಿ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಭರವಸೆ ನೀಡಿತು. 

ADVERTISEMENT

ರಾಜ್ಯದ ಪರವಾಗಿ ಸಭೆಯಲ್ಲಿ ಪಾಲ್ಗೊಂಡ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌ ಅವರು, ‘ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಯೋಜನೆಗೆ ಒಪ್ಪಿಗೆ ನೀಡಬಹುದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿ) ತಜ್ಞರ ತಂಡ ಶಿಫಾರಸು ಮಾಡಿ ಒಂಬತ್ತು ತಿಂಗಳುಗಳು ಕಳೆದಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ವನ್ಯಜೀವಿ ಅನುಮೋದನೆ ನೀಡಬೇಕು’ ಎಂದು ಕೋರಿದರು. 

‘ಯೋಜನಾ ಪ್ರದೇಶದ 10.68 ಹೆಕ್ಟೇರ್ ಪ್ರದೇಶವು ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿ ಬರುತ್ತಿರುವುದರಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಪಡೆಯಬೇಕು ಎಂದು ಕೇಂದ್ರ ಅರಣ್ಯ ಸಚಿವಾಲಯ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯವು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದರ ಬೆನ್ನಲ್ಲೇ, ಪ್ರಾಧಿಕಾರವು ತಜ್ಞರ ಸಮಿತಿ ರಚಿಸಿತ್ತು. ಸಮಿತಿಯು ಯೋಜನಾ ಸ್ಥಳಕ್ಕೆ ಭೇಟಿ ವರದಿ ಸಲ್ಲಿಸಿತ್ತು. ಆದರೆ, ಈ ವರದಿಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಾಧಿಕಾರ ಈವರೆಗೆ ನೀಡಿಲ್ಲ’ ಎಂದು ಗಮನ ಸೆಳೆದರು. 

‘ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳಿಗೆ ಮಹದಾಯಿ ನ್ಯಾಯಮಂಡಳಿ 2018ರಲ್ಲೇ ನೀರು ಹಂಚಿಕೆ ಮಾಡಿದೆ. ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ 2020ರಲ್ಲಿ ತಿಳಿಸಿದೆ. ಡಿಪಿಆರ್‌ಗೆ ಜಲ ಆಯೋಗ 2022ರ ಡಿಸೆಂಬರ್‌ನಲ್ಲಿ ಒಪ್ಪಿಗೆ ಕೊಟ್ಟಿದೆ. ಆ ಬಳಿಕ, ಅರಣ್ಯ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ವನ್ಯಜೀವಿ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ನೀಡಲು ಯಾವುದೇ ಅಡ್ಡಿ ಇಲ್ಲ. ಹೀಗಾಗಿ, ಕೇಂದ್ರ ಪ್ರಾಧಿಕಾರಗಳು ಸೂಕ್ತ ತೀರ್ಮಾನ ಕೈಗೊಳ್ಳಬಹುದು’ ಎಂದು ಅವರು ಒತ್ತಿ ಹೇಳಿದರು. 

ಯೋಜನೆ ಕಾಮಗಾರಿಗೆ ತಡೆ ಆದೇಶ ಹೊರಡಿಸಿದ್ದ ಗೋವಾ

‘ಈ ನಡುವೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ, ಗೋವಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಷೋಕಾಸ್‌ ನೋಟಿಸ್‌ ನೀಡಿದ್ದರು. ಇದಕ್ಕೆ ವ್ಯವಸ್ಥಾಪಕ ನಿರ್ದೇಶಕರು ಉತ್ತರ ನೀಡಿದ್ದರು. ಗೋವಾ ಸರ್ಕಾರದ ಒಪ್ಪಿಗೆ ಇಲ್ಲದೆ ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಾರದು ಎಂದು ಅಲ್ಲಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದರು. ಈ ಆದೇಶ ಹೊರಡಿಸಲು ಗೋವಾ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಈ ಆದೇಶವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.