ADVERTISEMENT

ಮಹದಾಯಿ ಹುಲಿ ಅಭಯಾರಣ್ಯ: ಗೋವಾ ಸರ್ಕಾರಕ್ಕೆ ಎನ್‌ಟಿಸಿಎ ಶಿಫಾರಸು

ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
<div class="paragraphs"><p>ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ &nbsp;(ಸಂಗ್ರಹ ಚಿತ್ರ)</p></div>

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ  (ಸಂಗ್ರಹ ಚಿತ್ರ)

   

ನವದೆಹಲಿ: ಮಹದಾಯಿ ವನ್ಯಜೀವಿ ಧಾಮವನ್ನು ಹುಲಿ ಅಭಯಾರಣ್ಯವನ್ನಾಗಿ ಘೋಷಿಸಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) ಗೋವಾ ಸರ್ಕಾರಕ್ಕೆ ಶಿಫಾರಸು ಮಾಡಿದೆ.  

ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಯ ವನ್ಯಜೀವಿ ಅನುಮೋದನೆ ಪ್ರಸ್ತಾವ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮುಂದಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಮಹದಾಯಿ ಯೋಜನೆಗಾಗಿ ವನ್ಯಜೀವಿಧಾಮದಿಂದ ಕರ್ನಾಟಕ ಸರ್ಕಾರ ನೀರನ್ನು ತೆಗೆದುಕೊಂಡು ಹೋಗುತ್ತಿದೆ ಎಂದು ದೂರಿ ಗೋವಾ ಸರ್ಕಾರ ಕಳೆದ ವರ್ಷ ನೋಟಿಸ್‌ ನೀಡಿತ್ತು. ಈ ಪ್ರಕರಣ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ.

ADVERTISEMENT

ಮಹದಾಯಿ ವನ್ಯಜೀವಿ ಧಾಮವನ್ನು ಹುಲಿ ಅಭಯಾರಣ್ಯವನ್ನಾಗಿ ಮೂರು ತಿಂಗಳೊಳಗೆ ಘೊಷಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಗೋವಾ ಸರ್ಕಾರಕ್ಕೆ 2023ರ ಜುಲೈ ತಿಂಗಳಲ್ಲಿ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಅಲ್ಲಿನ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ಹುಲಿ ಸಂರಕ್ಷಣಾ ಪ್ರಾಧಿಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. 

‘ಮಹದಾಯಿ ಕಾಡಿನಲ್ಲಿರುವ ಹುಲಿಗಳ ಸಂಖ್ಯೆ, ಪರಿಸರ ವ್ಯವಸ್ಥೆ ಹಾಗೂ ತಜ್ಞರು ನೀಡಿರುವ ತಾಂತ್ರಿಕ ಮಾಹಿತಿ ಆಧಾರದಲ್ಲಿ ಈ ಶಿಫಾರಸು ಮಾಡಲಾಗಿದೆ. ಈ ವನ್ಯಜೀವಿಧಾಮದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳಕ್ಕೆ ಸಾಕಷ್ಟು ಅವಕಾಶ ಇದೆ. ಹುಲಿ ಅಭಯಾರಣ್ಯವನ್ನಾಗಿ ಘೋಷಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಎನ್‌ಟಿಸಿಎ ಪ್ರಮಾಣಪತ್ರದಲ್ಲಿ ತಿಳಿಸಿದೆ. 

ಕರ್ನಾಟಕ, ಮಹಾರಾಷ್ಟ್ರ ಹಾಗೂ ಪಶ್ಚಿಮಘಟ್ಟದ ಅರಣ್ಯ ಭಾಗಗಳ ಜೊತೆಗೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ಮಹದಾಯಿ ವನ್ಯಜೀವಿ ಧಾಮದ ಅರಣ್ಯ ಭಾಗದಲ್ಲಿ ಕೆಲವು ಹುಲಿಗಳು ಕಾಣಿಸಿಕೊಂಡಿದ್ದವು. ಬಳಿಕ ಹುಲಿ ಮೀಸಲು ಪ್ರದೇಶವಾಗಿ ಘೋಷಿಸಬೇಕು ಎಂಬ ಬೇಡಿಕೆ ಎದ್ದಿತ್ತು. ಕಳೆದ ಮೂರು ವರ್ಷಗಳಲ್ಲಿ ಮಹದಾಯಿ ವನ್ಯಜೀವಿ ವಲಯದಲ್ಲಿ ನಾಲ್ಕು ಹುಲಿಗಳ ಹತ್ಯೆಯಾಗಿತ್ತು.

ಹುಲಿಗಳ ಹತ್ಯೆ ಬೆನ್ನಲ್ಲೇ ವರದಿ ನೀಡಿದ್ದ ಎನ್‌ಟಿಸಿಎ, ‘ಕರ್ನಾಟಕ ಮತ್ತು ಗೋವಾದಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶವು ಹುಲಿ ಸಂತತಿ ವೃದ್ಧಿಗೆ ಸೂಕ್ತವಾದ ಪ್ರದೇಶವಾಗಿದೆ. ಇದನ್ನು ಅಭಯಾರಣ್ಯವಾಗಿ ಘೋಷಿಸಬೇಕು’ ಎಂದು ಸಲಹೆ ಮಾಡಿತ್ತು.

ಉತ್ತರ ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಧಾಮವು ಕಾಳಿ ಹುಲಿ ಮೀಸಲು ಪ್ರದೇಶ, ಭೀಮಗಢ ವನ್ಯಜೀವಿ ಧಾಮ ಮತ್ತು ಭಗವಾನ್‌ ಮಹಾವೀರ ರಾಷ್ಟ್ರೀಯ ಉದ್ಯಾನ ಒಳಗೊಂಡಂತೆ ಭೌಗೋಳಿಕವಾಗಿ ಕರ್ನಾಟಕದ ಜೊತೆಗೆ ಬೆಸೆದುಕೊಂಡಿದೆ. 

ನಾಲಾ ತಿರುವು ಯೋಜನೆ ಮತ್ತಷ್ಟು ವಿಳಂಬ?

ಮಹದಾಯಿ ಹುಲಿ ಅಭಯಾರಣ್ಯವೆಂದು ಘೋಷಣೆಯಾದರೆ ಕಳಸಾ ನಾಲಾ ತಿರುವು ಯೋಜನೆ ಪ್ರಸ್ತಾವನೆ ಎನ್‌ಟಿಸಿಎ ಪರಿಶೀಲನೆಗೆ ಹೋಗಬೇಕಾಗುತ್ತದೆ. ಆಗ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಕಳಸಾ ನಾಲಾ ತಿರುವು ಯೋಜನೆಯಡಿ ಕಳಸಾ, ಹಲ್ತಾರ ಹಾಗೂ ಸುರ್ಲಾ ಹಳ್ಳಗಳ ನೀರನ್ನು ಮಲಪ್ರಭಾ ನದಿಗೆ ಕಣಕುಂಬಿ ಬಳಿ ಹರಿಸಲು ಉದ್ದೇಶಿಸಲಾಗಿದೆ. ಒಂದು ವೇಳೆ ಈ ತಿರುವು ಯೋಜನೆ ಕೈಗೆತ್ತಿಕೊಂಡರೆ ಮಹದಾಯಿ ವನ್ಯಜೀವಿಧಾಮಕ್ಕೆ ಬರುವ ನೀರನ್ನು ತಡೆ ಒಡ್ಡಿದ ಹಾಗಾಗುತ್ತದೆ. ಮಹದಾಯಿ ನದಿಗೆ ಬರುವ ನೀರಿನ ಪ್ರಮಾಣವೂ ಕಡಿಮೆಯಾಗಲಿದೆ ಎಂಬುದು ಗೋವಾ ಸರ್ಕಾರದ ವಾದ. 

‘ಮಹದಾಯಿ ನ್ಯಾಯಮಂಡಳಿಯು ಮೂರು ರಾಜ್ಯಗಳಿಗೆ ನೀರಿನ ಹಂಚಿಕೆ ಮಾಡಿದೆ. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ. ಕರ್ನಾಟಕದ ಪಾಲಿನ ನೀರನ್ನು ಮಾತ್ರ ನಾವು ಬಳಸಿಕೊಳ್ಳು ತ್ತೇವೆ. ಗೋವಾ ಆರೋಪದಲ್ಲಿ ಹುರುಳಿಲ್ಲ’ ಎಂಬುದು ರಾಜ್ಯದ ಪ್ರತಿವಾದ. 

‘ಖಾನಾಪುರ ತಾಲ್ಲೂಕಿನ ಹಲವು ಪ್ರದೇಶಗಳನ್ನು ಭೀಮಗಢ ವನ್ಯಜೀವಿ ಧಾಮದ ವ್ಯಾಪ್ತಿಗೆ ಸೇರಿಸುವಂತೆ ಕರ್ನಾಟಕ ಅರಣ್ಯ ಇಲಾಖೆ ಶಿಫಾರಸು ಮಾಡಿತ್ತು. ಕಳಸಾ ನಾಲಾ ತಿರುವು ಯೋಜನಾ ಪ್ರದೇಶದ ಪರಿಶೀಲನೆಗೆ ಬಂದಿದ್ದ ಎನ್‌ಟಿಸಿಎ ತಂಡವು ಈ ಪ್ರಸ್ತಾವನೆಯನ್ನು ಭಾಗಶಃ ಒಪ್ಪಿಕೊಂಡಿತ್ತು. ಈಗ ಹುಲಿ ಅಭಯಾರಣ್ಯಕ್ಕೆ ಶಿಫಾರಸು ಮಾಡಿದೆ. ಇದು ಪ್ರಾಧಿಕಾರದ ದ್ವಂದ್ವ ನಿಲುವಿಗೆ ಸಾಕ್ಷಿ’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ದೂರುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.