ADVERTISEMENT

ಕನ್ನಡ ಜಾತ್ರೆಯಲ್ಲಿ ಮರಾಠಿ ವಿದ್ಯಾರ್ಥಿಗಳು!

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಜನವರಿ 2023, 20:06 IST
Last Updated 7 ಜನವರಿ 2023, 20:06 IST
ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಗಡ್ಹಿಗ್ಲಾಜ್‌ ತಾಲ್ಲೂಕಿನ ‘ಸಂಸ್ಕಾರ’ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನ ವಿದ್ಯಾರ್ಥಿಗಳು
ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಗಡ್ಹಿಗ್ಲಾಜ್‌ ತಾಲ್ಲೂಕಿನ ‘ಸಂಸ್ಕಾರ’ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನ ವಿದ್ಯಾರ್ಥಿಗಳು   

ಹಾವೇರಿ: ಅಡುಗೆ ಮಾಡುವವರು ಕನ್ನಡಿಗರು, ಉಣ್ಣುವವರೂ ಕನ್ನಡಿಗರು, ಉಣಬಡಿಸುವವರಲ್ಲಿ ಕೆಲವರು ಮರಾಠಿಗರು. ಭಾಷಾ ಸೌಹಾರ್ದಕ್ಕೆ ಸಾಕ್ಷಿ ಎನ್ನುವಂತೆ ‘ಜರಾ ತೊಗೊರಿ’ ಎಂದು ಹರಕು ಕನ್ನಡದಲ್ಲಿಯೇ ಮಾತನಾಡಿಸಲು ಯತ್ನಿಸುವ ಯುವಕರ ತಂಡ ಸಮ್ಮೇಳನದ ಅಂಗಳದಲ್ಲಿದೆ.

ಅದರಲ್ಲೂ ಗಡಿ ತಗಾದೆ ತೆಗೆದು ಪದೇ ಪದೇ ಜಗಳಕ್ಕಿಳಿಯುವ ಮಹಾರಾಷ್ಟ್ರ ರಾಜ್ಯದ ಮರಾಠಿ ಭಾಷಿಕ ವಿದ್ಯಾರ್ಥಿಗಳೇ ಕನ್ನಡ ನುಡಿಹಬ್ಬದಲ್ಲಿ ಪಾಲ್ಗೊಂಡಿರುವುದು ವಿಶೇಷ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್‌ ತಾಲ್ಲೂಕಿನ ‘ಸಂಸ್ಕಾರ’ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನ 69 ವಿದ್ಯಾರ್ಥಿಗಳು ಸಮ್ಮೇಳನಕ್ಕೆ ಬಂದಿದ್ದಾರೆ. ಇವರೆಲ್ಲ ಹೋಟೆಲ್‌ ಮ್ಯಾನೇಜ್‌ಮೆಂಟಿನ ಪದವಿ ವಿದ್ಯಾರ್ಥಿಗಳು. ಸಮ್ಮೇಳನದಲ್ಲಿ ವೇದಿಕೆಯ ಮೇಲೆ, ಗಣ್ಯರಿಗೆ ಪ್ರತಿನಿತ್ಯ ಊಟೋಪಚಾರದ ವ್ಯವಸ್ಥೆಯ ಮೇಲುಸ್ತುವಾರಿ ಇವರೇ ವಹಿಸಿಕೊಂಡಿದ್ದಾರೆ.

ಪ್ರಾಯೋಗಿಕ ಜ್ಞಾನ ಸಿಗಲೆಂದು ಇವರಿಗೆ ಸಮ್ಮೇಳನಕ್ಕೆ ಕರೆ ತರಲಾಗಿದೆ. ಸಮ್ಮೇಳನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಪ್ರಮಾಣ ಪತ್ರವೂ ನೀಡಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಗಳಿಗೆ ಅಂಕ ನೀಡುವಾಗಲೂ ಇದರ ಅನುಭವ ಪರಿಗಣಿಸಲಾಗುತ್ತದೆ.
ಕೊಲ್ಹಾಪುರ ಗಡಿ ಜಿಲ್ಲೆ ಆಗಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಮರಾಠಿ ಜೊತೆಗೆ ಕನ್ನಡ ಭಾಷೆ ಕೂಡ ಬಲ್ಲವರಾಗಿದ್ದಾರೆ. ತಮಗೆ ವಹಿಸಿದ ಜವಾಬ್ದಾರಿ ಮುಗಿದ ನಂತರ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಕಾಲ ಕಳೆಯುತ್ತಿದ್ದಾರೆ. ಕನ್ನಡದ ಮಹತ್ವ ಕೂಡ ಅರಿಯುತ್ತಿದ್ದಾರೆ.

ADVERTISEMENT

‘ಭಾಷೆ ಯಾವುದಾದರೇನೂ ಎಲ್ಲದರ ಸತ್ವ ಒಂದೇ. ನಮ್ಮ ಕೋರ್ಸಿನ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ಕರೆದು ತಂದಿದ್ದಾರೆ. ಪ್ರಯಾಣದ ವೆಚ್ಚವನ್ನು ಕಾಲೇಜಿನವರೇ ಭರಿಸಿದ್ದಾರೆ. ಸಮ್ಮೇಳನ ಮುಗಿದ ನಂತರ ಪ್ರಮಾಣ ಪತ್ರ ನೀಡುತ್ತಾರೆ. ಯಾವುದೇ ರೀತಿಯ ಭತ್ಯೆ ಇಲ್ಲ. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಷ್ಟೊಂದು ಜನ ಭಾಗವಹಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಕನ್ನಡದ ಹೆಸರಾಂತ ಸಾಹಿತಿಗಳು, ನಟ–ನಟಿಯರು, ಹಾಸ್ಯ ಕಲಾವಿದರೆಲ್ಲ ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಟಿ.ವಿ.ಯಲ್ಲಿ ಕೆಲವರನ್ನು ನೋಡಿದ್ದೆ. ಈಗ ಅವರನ್ನು ಹತ್ತಿರದಿಂದ ನೋಡುವ ಅವಕಾಶ ಲಭಿಸಿದೆ. ನಿಜಕ್ಕೂ ಇದು ಹೊಸ ಅನುಭವ’ ಎಂದು ವಿದ್ಯಾರ್ಥಿ ನಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.