ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 53 ಕ್ಷೇತ್ರಗಳಲ್ಲಿ ಶಿವಸೇನಾ ಉಭಯ ಬಣಗಳ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.
ಎರಡೂವರೆ ವರ್ಷಗಳ ಹಿಂದೆ ಶಿವಸೇನಾ ವಿಭಜನೆಯಾಗಿತ್ತು. ಪಕ್ಷ ವಿಭಜಿಸಿ ಬಿಜೆಪಿ ಜತೆಗೆ ಕೂಡಿಕೆ ಮಾಡಿಕೊಂಡ ಏಕನಾಥ ಶಿಂದೆ ಮುಖ್ಯಮಂತ್ರಿಯಾಗಿದ್ದರು. ‘ಮಹಾ ಅಘಾಡಿ ಮೈತ್ರಿಕೂಟ’ದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅಧಿಕಾರ ಕಳೆದುಕೊಂಡಿದ್ದರು. ಇದೀಗ 53 ಕ್ಷೇತ್ರಗಳಲ್ಲಿ ಉದ್ಛವ್–ಶಿಂದೆ ಬಣಗಳ ಅಭ್ಯರ್ಥಿಗಳು ಪರಸ್ಪರ ಕಾದಾಡಲಿದ್ದಾರೆ.
53 ಅಭ್ಯರ್ಥಿಗಳಲ್ಲಿ 44 ಹಾಲಿ ಶಾಸಕರು ಸೇರಿದ್ದಾರೆ. ಕೊಪ್ರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಶಿಂದೆ ವಿರುದ್ಧ ಪ್ರಬಲ ಹುರಿಯಾಳುವನ್ನು ಉದ್ಧವ್ ಬಣ ಕಣಕ್ಕಿಳಿಸಿದೆ. ಶಿವಸೇನಾ ಮಾಜಿ ನಾಯಕ ಆನಂದ್ ದಿಘೆ ಅವರ ಸಂಬಂಧಿ ಕೇದಾರ್ ದಿಘೆ ಸವಾಲನ್ನು ಎದುರಿಸಬೇಕಿದೆ.
ವರ್ಲಿ ಕ್ಷೇತ್ರದಲ್ಲಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಅವರು ರಾಜ್ಯಸಭಾ ಸದಸ್ಯ ಮಿಲಿಂದ್ ದಿಯೋರಾ ಅವರ ಸ್ಪರ್ಧೆ ಎದುರಿಸಬೇಕಿದೆ. ಹೀಗಾಗಿ, ಈ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ.
ಮಿಲಿಂದ್ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದರು. 2014 ಹಾಗೂ 2019ರ ಚುನಾವಣೆಗಳಲ್ಲಿ ಸೋತಿದ್ದರು. ಈ ವರ್ಷದ ಲೋಕಸಭಾ ಚುನಾವಣೆಗೆ ಪೂರ್ವದಲ್ಲಿ ಶಿವಸೇನಾ (ಶಿಂದೆ ಬಣ) ಸೇರಿದ್ದರು. ಬಳಿಕ ರಾಜ್ಯಸಭಾ ಸದಸ್ಯರಾಗಿದ್ದರು.
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನಾ ಜತೆಗೂಡಿ ಸ್ಪರ್ಧಿಸಿದ್ದವು. ಬಿಜೆಪಿ 105ರಲ್ಲಿ ಹಾಗೂ ಶಿವಸೇನಾ 56 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದವು. ಬಳಿಕ ಮುಖ್ಯಮಂತ್ರಿ ಗಾದಿಯ ವಿಷಯದಲ್ಲಿ ಎರಡೂ ಪಕ್ಷಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಹಾಗೂ ಅವಿಭಜಿತ ಎನ್‌ಸಿಪಿಯ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿದ್ದರು.
ಏಕನಾಥ ಶಿಂದೆ ನೇತೃತ್ವದಲ್ಲಿ ಶಿವಸೇನಾದ 41 ಶಾಸಕರು ಬಂಡಾಯವೆದ್ದ ಕಾರಣ ಮಹಾ ಅಘಾಡಿ ಸರ್ಕಾರ 2022ರ ಜೂನ್‌ನಲ್ಲಿ ಪತನಗೊಂಡಿತ್ತು. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಶಿಂದೆ ಮುಖ್ಯಮಂತ್ರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.