ADVERTISEMENT

ಸರ್ಕಾರದ ನಿರ್ಲಕ್ಷ್ಯದಿಂದ ಏಥರ್ ಮಹಾರಾಷ್ಟ್ರಕ್ಕೆ: ಬೆಲ್ಲದ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:21 IST
Last Updated 27 ಜೂನ್ 2024, 16:21 IST
ಅರವಿಂದ ಬೆಲ್ಲದ
ಅರವಿಂದ ಬೆಲ್ಲದ   

ಬೆಂಗಳೂರು: ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಏಥರ್‌ ಎನರ್ಜಿ ಕಂಪನಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯಿಂದ ಹಿಂದಕ್ಕೆ ಸರಿದು ಮಹಾರಾಷ್ಟ್ರಕ್ಕೆ ಹೋಗಿದೆ. ಇದರಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್‌ ಬೆಲ್ಲದ ಹೇಳಿದ್ದಾರೆ.

ಈ ಕಂಪನಿಯು ರಾಜ್ಯದಲ್ಲಿ ಸುಮಾರು ₹2,000 ಕೋಟಿ ಹೂಡಿಕೆ ಮಾಡಿ 4,000 ಮಂದಿಗೆ ಉದ್ಯೋಗ ಕಲ್ಪಿಸಲು ಆಸಕ್ತಿ ತೋರಿಸಿತ್ತು. ಆದರೆ, ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸದ ಕಾರಣ ಏಥರ್‌ ಮಹಾರಾಷ್ಟ್ರಕ್ಕೆ ಹೋಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಥರ್‌ ಎನರ್ಜಿ ಬೆಂಗಳೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕಂಪನಿ. ರಾಜ್ಯದಲ್ಲಿ ಬಂಡವಾಳ ಹೂಡಲು ವಿಪುಲ ಅವಕಾಶಗಳಿದ್ದರೂ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಂಪನಿ ಜತೆ ಮಾತುಕತೆ ನಡೆಸಿ ಹೂಡಿಕೆಗೆ ಮನವೊಲಿಸುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಕೂಡಾ ಮಾತುಕತೆ ನಡೆಸಿಲ್ಲ ಎಂದು ಎಂದು ದೂರಿದ್ದಾರೆ.

ADVERTISEMENT

ಸರ್ಕಾರ ಇನ್ನು ಮುಂದಾದರೂ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಂಪನಿಗಳನ್ನು ಆಕರ್ಷಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಏಥರ್‌ ಎನರ್ಜಿಯಂತೆ ಇತರೆ ಕಂಪನಿಗಳು ಕೂಡ ರಾಜ್ಯದಿಂದ ಹಿಂದೆ ಸರಿಯುವ ಪರಿಸ್ಥಿತಿ ಎದುರಾಗಬಹುದು. ಇದು ರಾಜ್ಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ ಎಂದು ಬೆಲ್ಲದ ಹೇಳಿದ್ದಾರೆ.

ರಾಜ್ಯಕ್ಕೆ ಹೂಡಿಕೆ ಮಾಡಲು ಮುಂದಾಗುವ ಕಂಪನಿಗಳನ್ನು ಪ್ರಧಾನಿ ಮೋದಿ ಅವರು ಗುಜರಾತ್‌ಗೆ ಸೆಳೆಯುತ್ತಿದ್ದಾರೆ ಎನ್ನುವ ಆರೋಪ ಮಾಡುವ ಕಾಂಗ್ರೆಸ್‌ ನಾಯಕರು ಮೊದಲು ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.