ADVERTISEMENT

ಸದನದೊಳಗೆ ಮೊಬೈಲ್‌ ವೀಕ್ಷಿಸಿದ ಶಾಸಕ ಮಹೇಶ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 18:27 IST
Last Updated 17 ಡಿಸೆಂಬರ್ 2018, 18:27 IST

ಬೆಳಗಾವಿ: ವಿಧಾನಸಭೆಯ ಒಳಗೆ ಶಾಸಕರು ಮೊಬೈಲ್ ಕೊಂಡೊಯ್ಯಲು ನಿರ್ಬಂಧವಿದೆ. ಆದರೂ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿ ಶಾಸಕ ಎನ್. ಮಹೇಶ್ ತಮ್ಮ ಮೊಬೈಲ್‍ನಲ್ಲಿ ಫೋಟೊ ವೀಕ್ಷಿಸುತ್ತಿದ್ದುದು ಚರ್ಚೆಗೆ ಗ್ರಾಸವಾಯಿತು.

ಸೋಮವಾರದ ಕಲಾಪ ಆರಂಭವಾಗುವುದಕ್ಕೂ ಮೊದಲು ಮಹೇಶ್ ಅವರು ಮೊಬೈಲ್‍ನಲ್ಲಿ ಯುವತಿಯೊಬ್ಬಳ ಫೋಟೊ ನೋಡುತ್ತಿರುವುದು ಸುದ್ದಿ ವಾಹಿನಿಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.

ಈ ಹಿಂದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲೆ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್ ನಾಯಕಿಯೊಬ್ಬರ ಫೋಟೊ
ವನ್ನು ಮೊಬೈಲ್‍ನಲ್ಲಿ ನೋಡುತ್ತಿದ್ದ ಪ್ರಕರಣ ವಿವಾದವಾಗಿತ್ತು. ಈ ಹಿನ್ನೆಲೆ ಯಲ್ಲಿ ಅಂದಿನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸದನಕ್ಕೆ ಶಾಸಕರು ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದ್ದರು. ಸದನದ ಹೊರಗೆ ಮೊಬೈಲ್ ಇರಿಸುವ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮಗನಿಗೆ ಹುಡುಗಿ ನೋಡ್ತಿದ್ದೇನೆ: ‘ಮೊಬೈಲ್‍ನಲ್ಲಿ ಫೋಟೊ ನೋಡುತ್ತಿರುವುದು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಸಕ ಮಹೇಶ್, ‘ನಾನು ಮೊಬೈಲ್ ಒಳಗಡೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ಮಗನಿಗೆ ಹುಡುಗಿ ನೋಡ್ತಾ ಇದ್ದೇನೆ. ಕುತೂಹಲಕ್ಕೆ ಫೋಟೊ ನೋಡಿ ಹುಡುಗಿಯ ಜನ್ಮ ದಿನಾಂಕ, ಮಾಹಿತಿ ನೋಡುತ್ತಿದ್ದೆ’ ಎಂದು ಮೊಬೈಲ್‍ನ ಫೋಟೊವನ್ನು ಮಾಧ್ಯಮಗಳಿಗೆ ತೋರಿಸಿ, ‘ಸದನದೊಳಗೆ ಮೊಬೈಲ್ ತೆಗೆದುಕೊಂಡು ಹೋಗಿರುವುದು ನನ್ನ ತಪ್ಪು’ ಎಂದು ಒಪ್ಪಿಕೊಂಡರು.

‘ಕೊಳ್ಳೇಗಾಲ ಆಸ್ಪತ್ರೆಯ ವೆಂಟಿಲೇಷನ್ ಸಮಸ್ಯೆ ಬಗ್ಗೆ ವಿವರ ನೀಡುತ್ತಾರೆ ಎಂಬ ಕಾರಣಕ್ಕೆ ಸದನದೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೆ. ಸಭಾಧ್ಯಕ್ಷರು ಏನೂ ಕೇಳಿಲ್ಲ. ಆದರೆ ಸ್ಪಷ್ಟೀಕರಣ ನೀಡುವುದು ನನ್ನ ಜವಾಬ್ದಾರಿ. ನಾನೇ ಅವರನ್ನು ಭೇಟಿ ಮಾಡಿ ಉತ್ತರ ನೀಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.