ADVERTISEMENT

ಮೇಕೆದಾಟು: ಶಿಂಷಾ, ಮುತ್ತತ್ತಿ, ಸಂಗಮ ಮುಳುಗಡೆ?

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 20:18 IST
Last Updated 7 ಡಿಸೆಂಬರ್ 2018, 20:18 IST
   

ಮಳವಳ್ಳಿ: ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸುವುದರಿಂದ ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪಿಸಿರುವ ಸುಮಾರು 80 ವರ್ಷಗಳಷ್ಟು ಹಳೆಯ ಶಿಂಷಾ ಜಲ ವಿದ್ಯುತ್ ಕೇಂದ್ರದ ಒಂದು ಘಟಕ ಮುಳುಗಡೆಯಾಗುವ ಸಾಧ್ಯತೆ ಇದೆ.

ಅಣೆಕಟ್ಟು ನಿರ್ಮಾಣದಿಂದ ಒಟ್ಟು 4,996 ಹೆಕ್ಟೇರ್‌ ಪ್ರದೇಶ ಮುಳುಗಡೆಯಾಗಲಿದೆ. ಶಿಂಷಾದಲ್ಲಿರುವ ಎರಡು ಜಲವಿದ್ಯುತ್‌ ಉತ್ಪಾದನಾ ಘಟಕಗಳ ಪೈಕಿ ಒಂದು ಮುಳುಗಡೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶುಕ್ರವಾರ ಶಿಂಷಾ ಜಲವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

ADVERTISEMENT

1938 ರಲ್ಲಿ ಮೈಸೂರು ಮಹಾರಾಜರ ಕೃಷ್ಣರಾಜ ಒಡೆಯರ್ ರಾಜ್ಯದ ಎರಡನೇ ಜಲವಿದ್ಯುತ್‌ ಉತ್ಪಾದನಾ ಕೇಂದ್ರವನ್ನು ಶಿಂಷಾದಲ್ಲಿ ಸ್ಥಾಪಿಸಿದ್ದರು. ಎರಡು ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ತಲಾ 8.6 ಮೆಗಾವಾಟ್‌ನಂತೆ ಒಟ್ಟು 17.2 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಮುಳುಗಡೆಯಾಗುವ ಘಟಕ ಉಳಿಸಿಕೊಳ್ಳುವ ಉದ್ದೇಶದಿಂದ ಟರ್ಬೈನ್‌ ಅನ್ನು 15 ರಿಂದ 25 ಅಡಿಗಳಷ್ಟು ಮೇಲಕ್ಕೆತ್ತಿ ಕಾರ್ಯ ನಿರ್ವಹಿಸುವಂತೆ ಮಾಡಲು ಸಾಧ್ಯವಿದೆ. ಹಳೆಯ ಯಂತ್ರವನ್ನು ತೆಗೆದು ಹೊಸ ಯಂತ್ರ ಅಳವಡಿಸುವುದರಿಂದ ವಿದ್ಯುತ್‌ ಉತ್ಪಾದನೆ ಪ್ರಮಾಣವನ್ನೂ ಹೆಚ್ಚಿಸಬಹುದಾಗಿದೆ. ಈ ಕುರಿತು ಪರಿಶೀಲನೆ ನಡೆಸುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.

ಅಣೆಕಟ್ಟೆ ನಿರ್ಮಾಣದಿಂದ ಹಿನ್ನೀರಿನಲ್ಲಿ ಧಾರ್ಮಿಕ ಪ್ರವಾಸಿ ತಾಣಗಳಾದ ಮುತ್ತತ್ತಿ, ಸಂಗಮ, ಚೋಳರ ಕಾಲದ ದೇವಸ್ಥಾನವೂ ಮುಳುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.