ADVERTISEMENT

ಮಲೆನಾಡು, ಕರಾವಳಿಯ ವಿವಿಧೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 20:20 IST
Last Updated 14 ನವೆಂಬರ್ 2021, 20:20 IST
ಕೊಪ್ಪದಲ್ಲಿ ಭಾನುವಾರ ಸುರಿದ ವ್ಯಾಪಕ ಮಳೆಯಿಂದಾಗಿ ಹೋಟೆಲ್, ಅಂಗಡಿಗೆ ಮಳೆ ನೀರು ನುಗ್ಗಿರುವುದು
ಕೊಪ್ಪದಲ್ಲಿ ಭಾನುವಾರ ಸುರಿದ ವ್ಯಾಪಕ ಮಳೆಯಿಂದಾಗಿ ಹೋಟೆಲ್, ಅಂಗಡಿಗೆ ಮಳೆ ನೀರು ನುಗ್ಗಿರುವುದು   

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಹಾಗೂ ಕರಾವಳಿಯ ಕೆಲವೆಡೆ ಭಾನುವಾರ ಧಾರಾಕಾರ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಕಳಸ ಭಾಗದಲ್ಲಿ ಕಾಫಿ, ಅಡಿಕೆ ಬೆಳೆಗೆ ಹಾನಿಯಾಗಿದೆ. ಕೊಪ್ಪ ಪಟ್ಟಣದ ಸಾರ್ವಜನಿಕರ ಆಸ್ಪತ್ರೆ ಮುಂಭಾಗದ ರಸ್ತೆ ಬದಿಯ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿತ್ತು.

ಕಳಸ ಬಳಿಯ ಬಾಳೆಹೊಳೆ ಭಾಗದ ತೋಟಗಳಲ್ಲಿ ನೀರು ಭೋರ್ಗರೆದು ಹರಿದಿದೆ. ಉದುರಿದ್ದ ಅಡಿಕೆ ಕಾಯಿಗಳು ನೀರು ಪಾಲಾಗಿವೆ. ಬದುಗಳು ಕೊಚ್ಚಿ ಹೋಗಿವೆ. ಕೆಲವೆಡೆ ಮಣ್ಣು ಕೊಚ್ಚಿ ಹೋಗಿ ಕೊರಕಲಾಗಿದೆ. ಕಾಫಿ ಗಿಡಗಳಲ್ಲಿನ ಕಾಯಿಗಳು ಉದುರಿವೆ.

ADVERTISEMENT

ಕೊಪ್ಪ, ಕಳಸ ಭಾಗದ ಕೆಲವೆಡೆ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಭದ್ರಾ ನದಿಯಲ್ಲಿ ಹರಿವು ತುಸು ಜಾಸ್ತಿಯಾಗಿದೆ. ಚಿಕ್ಕಮಗಳೂರು, ಗಿರಿಶ್ರೇಣಿ, ಶೃಂಗೇರಿ, ಮೂಡಿಗೆರೆ ಭಾಗದಲ್ಲಿ ಸಾಧಾರಣವಾಗಿ ಮಳೆ ಸುರಿದಿದೆ.

ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಜಾನೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಸಂಜೆ 4 ಗಂಟೆಯಿಂದ ರಾತ್ರಿಯವರೆಗೂ ಮಂಗಳೂರು, ಸುಬ್ರಹ್ಮಣ್ಯ, ಮೂಡುಬಿದಿರೆ ಮುಂತಾದೆಡೆ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಉಡುಪಿಯಲ್ಲಿ ತುಂತುರು ಮಳೆಯಾಗಿದೆ.

ಚಿತ್ರದುರ್ಗ, ಶಿವಮೊಗ್ಗ –ಭಾರಿ ಮಳೆ:

ದಾವಣಗೆರೆ ವರದಿ: ಚಿತ್ರದುರ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಹೊಸದುರ್ಗ ತಾಲ್ಲೂಕಿನ ದೇವರಗುಡ್ಡ, ಹಾಲುರಾಮೇಶ್ವರ ಗುಡ್ಡ, ದುಗ್ಗಾವರ ಬೆಟ್ಟ, ಲಕ್ಕಿಹಳ್ಳಿ ಅಂದ್‌ಕಲ್ಲು ಗುಡ್ಡದಿಂದ ಸಾಕಷ್ಟು ನೀರು ಹರಿಯುತ್ತಿದೆ. ಇದರಿಂದ ಜಮೀನುಗಳಲ್ಲಿ ಜೋಪು ಹೆಚ್ಚಾಗಿದೆ. ಹೊಳಲ್ಕೆರೆ, ಚಿಕ್ಕಜಾಜೂರು ಭಾಗದಲ್ಲಿ ಕೊಯ್ಲಿಗೆ ಬಂದಿದ್ದ ರಾಗಿ, ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ.

ದಾವಣಗೆರೆ ನಗರ ಸೇರಿ ಜಿಲ್ಲೆಯ ಚನ್ನಗಿರಿ, ಬಸವಾಪಟ್ಟಣ, ಮಲೇಬೆನ್ನೂರು, ಸಂತೇಬೆನ್ನೂರು, ಸಾಸ್ವೇಹಳ್ಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕೋಣಂದೂರು, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿಯ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಕೆಲವೆಡೆ ವಿದ್ಯುತ್‌ ಪೂರೈಕೆ ಸ್ಥಗಿತವಾಗಿತ್ತು. ಆಗಾಗ್ಗೆ ಮಳೆ ಸುರಿಯುತ್ತಿರುವ ಕಾರನ ಬೆಳೆ ಕೊಯ್ಲಿಗೆ ತೊಡಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.