ಕಲಬುರ್ಗಿ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡಿದ ತೀರ್ಪನ್ನು ಗೌರವಿಸಬೇಕು. ಜನತಾ ಜನಾರ್ದನರ ತೀರ್ಮಾನಕ್ಕೆ ತಲೆಬಾಗುತ್ತೇನೆ. ಸೋಲು ಗೆಲುವು ಎಂಬುದು ಪ್ರಜಾಪ್ರಭುತ್ವದ ಗುಣವಾಗಿದ್ದು, ಅದನ್ನು ಸ್ವೀಕರಿಸಬೇಕು’ ಎಂದು ಗುಲಬರ್ಗಾ ಲೋಕಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನರು ಯಾಕೆ ಇಂಥ ತೀರ್ಪು ನೀಡಿದರು ಎಂಬುದರ ಬಗ್ಗೆ ಅವಲೋಕನ ಮಾಡಬೇಕಿದೆ. ಕಾಂಗ್ರೆಸ್‌ಗೆ ದೇಶವ್ಯಾಪಿ ಹಿನ್ನಡೆಯಾಗಿದ್ದು, ಮೂರು ದಿನಗಳಲ್ಲಿ ನವದೆಹಲಿಯಲ್ಲಿ ಪಕ್ಷದ ವರಿಷ್ಠರ ಸಭೆ ನಡೆಸಿ, ಇದರ ಕುರಿತು ಚರ್ಚಿಸಲಾಗುವುದು’ ಎಂದರು.
‘ನಂಬಿದ ತತ್ವ, ಸಿದ್ಧಾಂತಕ್ಕೆ ಚುನಾವಣೆಯಲ್ಲಿ ಗೆಲುವು ಸಿಗಲಿಲ್ಲ. ಒಟ್ಟಾರೆ ಪ್ರಕ್ರಿಯೆಯಲ್ಲಿ ಎಲ್ಲಿ ಎಡವಿದ್ದೇವೆ? ಏನು ತಪ್ಪು ಮಾಡಿದ್ದೇವೆ ಎಂಬುದನ್ನು ಅರಿಯಬೇಕಿದೆ. ಪಕ್ಷ ಮತ್ತು ನನ್ನ ಕುರಿತು ತಪ್ಪು ಕಲ್ಪನೆ ಹೊಂದಿರುವವರ ಮನವೊಲಿಸುತ್ತೇನೆ. ಮುನಿಸಿಕೊಂಡ ನಾಯಕರ ಮನಗೆದ್ದು, ಮತ್ತೆ ಪಕ್ಷ ಬಲಪಡಿಸಲು ಪ್ರಯತ್ನಿಸುವೆ’ ಎಂದರು.
‘ಚುನಾವಣೆಯಲ್ಲಿ ಸೋತೆ ಎಂಬ ಕಾರಣಕ್ಕೆ ಇವಿಎಂ ಯಂತ್ರಗಳನ್ನು ದೂಷಿಸುವುದಿಲ್ಲ. ಅವುಗಳ ಬಗ್ಗೆ ದೂರಿದರೆ, ಸೋಲಿಗೆ ಕುಂಟು ನೆಪವಾಗುತ್ತದೆ. ಇವಿಎಂ ಗೋಲ್‌ಮಾಲ್ ಆಗಿದೆಯೋ ಇಲ್ವೊ ಎಂಬುದನ್ನು ಹೇಳುವುದಿಲ್ಲ. ಜನರು ಆಶೀರ್ವಾದ ಮಾಡಲಿಲ್ಲ ಎಂಬುದು ಮಾತ್ರ ನನಗೆ ಗೊತ್ತು. ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
‘ಚುನಾವಣಾ ಆಯೋಗವು ಕೋರಿದಷ್ಟು ಇವಿಎಂ ಯಂತ್ರಗಳು ಬಿಇಎಲ್ ಸಂಸ್ಥೆಯಿಂದ ಪೂರೈಕೆ ಆಗಿಲ್ಲ ಎಂಬದೂರುಗಳಿವೆ. ಕೆಲ ಗೊಂದಲಗಳ ಬಗ್ಗೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಈ ಎಲ್ಲಾ ವಿಷಯಗಳನ್ನು ಪರಾಮರ್ಶಿಸಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗುವುದು’ ಎಂದರು.
ಇದನ್ನೂ ಓದಿ...ಕಲಬುರ್ಗಿಗಾಗಿ ಖರ್ಗೆ; ದೇಶಕ್ಕಾಗಿ ಮೋದಿ
*
ರಾಜ್ಯದ ಸಮ್ಮಿಶ್ರ ಸರ್ಕಾರದ ಮೇಲೆ ಚುನಾವಣಾ ಫಲಿತಾಂಶವು ಯಾವುದೇ ಪರಿಣಾಮ ಬೀರುವುದಿಲ್ಲ. ವಿಧಾನಸಭಾ ಮತ್ತು ಲೋಕಸಭಾ ಚುನಾವಣಾ ಫಲಿತಾಂಶ ವ್ಯತರಿಕ್ತವಾಗಿರುತ್ತವೆ.
–ಮಲ್ಲಿಕಾರ್ಜುನ ಖರ್ಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.