ಬೆಂಗಳೂರು: ಎಐಸಿಸಿ ನೂತನ ಅಧ್ಯಕ್ಷರ ಆಯ್ಕೆಗಾಗಿ ಸೋಮವಾರ ನಡೆದ ಮತದಾನದಲ್ಲಿ ರಾಜ್ಯದ 503 ಅರ್ಹ ಮತದಾರರ ಪೈಕಿ 501 ಮಂದಿ ಮತ ಚಲಾಯಿಸಿದರು.
‘ಒಟ್ಟು 503 ಮತದಾರರ ಪೈಕಿ ಇಬ್ಬರು ಮಾತ್ರ ಮತ ಚಲಾಯಿಸಿಲ್ಲ. ಹಿರಿಯ ಮುಖಂಡ ಕೆ. ರೆಹಮಾನ್ ಖಾನ್ ಅವರಿಗೆ ಕೋವಿಡ್ ಇರುವುದರಿಂದ ಮತಗಟ್ಟೆಗೆ ಬರಲು ಸಾಧ್ಯವಾಗಿಲ್ಲ. ಅವರ ಪರವಾಗಿ, ಒಪ್ಪಿಗೆ ಮೇರೆಗೆ ಮತಗಟ್ಟೆ ಅಧಿಕಾರಿ ಮತ ಚಲಾಯಿಸಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಮೂಲಗಳ ಪ್ರಕಾರ, ವಿದೇಶ ಪ್ರವಾಸದಲ್ಲಿರುವ ನಿವೇದಿತ್ ಆಳ್ವ ಮತ್ತು ಪ್ರಶಾಂತ್ ದೇಶಪಾಂಡೆ ಮತ ಚಲಾಯಿಸಿಲ್ಲ.
ಕೆಪಿಸಿಸಿ ಕಚೇರಿ ಹಾಗೂ ಬಳ್ಳಾರಿಯ ಸಂಗನಕಲ್ಲು ಬಳಿ ಭಾರತ್ ಜೋಡೊ ಪಾದಯಾತ್ರೆಯ ಕ್ಯಾಂಪ್‌ನಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯದ 495 ಮಂದಿ ಕೆಪಿಸಿಸಿ ಕಚೇರಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಸಂಸದ ಡಿ.ಕೆ. ಸುರೇಶ್, ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಶಾಸಕ ಬಿ. ನಾಗೇಂದ್ರ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್. ಆಂಜನೇಯುಲು ಕೂಡ ಸಂಗನಕಲ್ಲು ಕ್ಯಾಂಪ್‌ನಲ್ಲಿ ಮತ ಚಲಾವಣೆ ಮಾಡಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹೊರರಾಜ್ಯಗಳ 40 ಮಂದಿ ಭಾರತ್ ಜೋಡೊ ಯಾತ್ರಿಗಳು ಸಂಗನಕಲ್ಲು ಕ್ಯಾಂಪ್‌ನಲ್ಲಿ ಮತ ಚಲಾಯಿಸಿದರು.
ಹೊರ ರಾಜ್ಯಗಳ ಚುನಾವಣಾಧಿಕಾರಿಗಳಾಗಿ ನಿಯುಕ್ತಿಗೊಂಡಿರುವ ಶಾಸಕ ಜಿ. ಪರಮೇಶ್ವರ ಮತ್ತು ರಾಜ್ಯಸಭಾ ಜಿ.ಸಿ. ಚಂದ್ರಶೇಖರ್ ತಾವು ಕಾರ್ಯನಿರ್ವಹಿಸುತ್ತಿದ್ದ ಸ್ಥಳಗಳಿಂದಲೇ ಮತದಾನ ಮಾಡಿದರು.
ಭರ್ಜರಿ ಗೆಲುವಿನ ವಿಶ್ವಾಸ: ‘ಮಲ್ಲಿಕಾರ್ಜುನ ಖರ್ಗೆ ಅವರು 50 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ರಾಜ್ಯದ ಎಲ್ಲರೂ ಅವರ ಪರವಾಗಿ ಮತ ಚಲಾಯಿಸುವ ಭರವಸೆಯಿದೆ. ಖರ್ಗೆ ಅವರು ಭಾರಿ ಅಂತರದ ಗೆಲುವನ್ನು ಸಾಧಿಸುವ ವಿಶ್ವಾಸವಿದೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ‘ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ಯಾವತ್ತಾದರೂ ಆ ಪಕ್ಷದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದೆಯೆ? ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬಸವರಾಜ ಬೊಮ್ಮಾಯಿ ಅವರನ್ನು ಪ್ರಜಾತಾಂತ್ರಿಕವಾಗಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತೆ? ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತೆ’ ಎಂದು ಪ್ರಶ್ನಿಸಿದರು.
ತರೂರ್‌ಗೆ ಶುಭಾಶಯ ಹೇಳಿದ ಖರ್ಗೆ
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ಅವರಿಗೆ ಸೋಮವಾರ ಬೆಳಿಗ್ಗೆ ದೂರವಾಣಿ ಕರೆಮಾಡಿ ಶುಭಾಶಯ ಹೇಳಿದರು.
ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಅವರು, ‘ಭವಿಷ್ಯದ ಪೀಳಿಗೆಗಳಿಗಾಗಿ ಬಲಿಷ್ಠ ಮತ್ತು ಉತ್ತಮವಾದ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ನಾವಿಬ್ಬರೂ ಸ್ಪರ್ಧಿಸಿದ್ದೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.