ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಅವರ ಪುತ್ರನೇ ಕಾರಣ’ ಎಂಬ ವಿಚಾರ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ವರದಿಯಲ್ಲಿಪ್ರಸ್ತಾಪವಾಗಿದೆ.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಕಾರಣಗಳ ಬಗ್ಗೆ ಅಧ್ಯಯನ ನಡೆಸಲು ಹಿರಿಯ ಮುಖಂಡ ವಿ.ಆರ್.ಸುದರ್ಶನ್ ನೇತೃತ್ವದಲ್ಲಿ ‘ಸತ್ಯ ಶೋಧನಾ ಸಮಿತಿ’ ರಚಿಸಿತ್ತು.
ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕ ಶರಣ ಪ್ರಕಾಶ ಪಾಟೀಲ ಪ್ರಮುಖ ಕಾರಣಕರ್ತರು. ಈ ಇಬ್ಬರು ನಾಯಕರು ಹಿರಿಯ ಮುಖಂಡರನ್ನು ತಾತ್ಸಾರದಿಂದ ನೋಡಿದ್ದು; ಪಕ್ಷದ ನಾಯಕರು, ಕಾರ್ಯಕರ್ತರ ಜತೆಗೆ ಸರಿಯಾಗಿ ನಡೆದುಕೊಳ್ಳದಿರುವುದು ಚುನಾವಣೆ ಮೇಲೆ ಪರಿಣಾಮ ಬೀರಿದೆ. ಚಿಕ್ಕವರ ದರ್ಬಾರ್ ಪಕ್ಷದ ಹಿರಿಯ ಮುಖಂಡರನ್ನು ಕೆರಳಿಸುವಂತೆ ಮಾಡಿತ್ತು. ಕೆಲ ನಾಯಕರ ವರ್ತನೆಯಿಂದಾಗಿಯೇ ಸೋಲಾಗಿದೆ ಎಂದು ವರದಿಯಲ್ಲಿಬೊಟ್ಟು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕುಟುಂಬ ರಾಜಕಾರಣ:ಕುಟುಂಬ ರಾಜಕಾರಣದ ಬಿರುಗಾಳಿ ಜೋರಾಗಿಯೇ ಬೀಸಿದೆ. ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡ ಸೋಲಿಗೆ ಇದು ಪ್ರಮುಖ ಕಾರಣ ಎನ್ನಲಾಗಿದೆ. ಕ್ಷೇತ್ರದಲ್ಲಿ ಒಕ್ಕಲಿಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಲಿಂಗಾಯತರ ಮತಗಳು ಬಿಜೆಪಿ ಪರವಾಗಿ ಒಗ್ಗೂಡಿದ್ದರಿಂದ ಹಿನ್ನಡೆಯಾಗಿದೆ. ಹಾಸನ, ಮಂಡ್ಯ ಕ್ಷೇತ್ರದಲ್ಲಿ ಮೊಮ್ಮಕ್ಕಳನ್ನು ನಿಲ್ಲಿಸಿ, ಗೌಡರು ತುಮಕೂರಿನಿಂದ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಸೋಲಿಗೆ ಪಟ್ಟಿ ಮಾಡಲಾಗಿದೆ.
ಕೋಲಾರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಚ್.ಮುನಿಯಪ್ಪಸೋಲಿಗೆ ಶಾಸಕ ಕೆ.ಆರ್.ರಮೇಶ್ ಕುಮಾರ್, ಮುಖಂಡರಾದ ನಾರಾಯಣಸ್ವಾಮಿ, ವರ್ತೂರು ಪ್ರಕಾಶ್ ಇತರರು ಕಾರಣ ಎಂದು ಹೇಳಿರುವ ಅಂಶ ವರದಿಯಲ್ಲಿ ದಾಖಲಾಗಿದೆ.
ಮೈತ್ರಿಗೆ ವಿರೋಧ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿಯಿಂದಾಗಿ ಸೋಲುಂಟಾಗಿದ್ದು, ಮುಂದಿನ ದಿನಗಳಲ್ಲಿ ಮೈತ್ರಿ ಮುಂದುವರಿಸಬಾರದು ಎಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಲಹೆ ಮಾಡಿದ್ದಾರೆ. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಜತೆಗೆ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ ಎಂದು ಸಮಿತಿ
ಅಭಿಪ್ರಾಯಪಟ್ಟಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಆ ಪಕ್ಷದ ನಾಯಕರು ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟಿದ್ದರು. ಆದರೆ ಮೈತ್ರಿ ಪಕ್ಷಗಳು ಒಟ್ಟಾಗಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಪ್ರಚಾರ ಮಾಡುವಲ್ಲಿ ಸೋತಿವೆ. ಕಾಂಗ್ರೆಸ್– ಜೆಡಿಎಸ್ ನಾಯಕರು, ಕಾರ್ಯಕರ್ತರು ಸಂಘಟಿತ ಹೋರಾಟ ಮಾಡಲಿಲ್ಲ ಎಂದು ವರದಿ ಬೊಟ್ಟುಮಾಡಿತೋರಿದೆ.
ಯೋಜನೆ ರೂಪಿಸುವ ಕುರಿತು ಪ್ರಸ್ತಾಪ
63 ಪುಟಗಳ ವರದಿಯಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿರುವ ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ಪಕ್ಷ ಸಂಘಟನೆ ಸೇರಿದಂತೆ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ತರಲು ಏನೆಲ್ಲ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ತಕ್ಷಣಕ್ಕೆ ಏನು ಮಾಡಬೇಕು, ದೀರ್ಘಾವಧಿಯಲ್ಲಿ ಯಾವ ಯೋಜನೆಗಳನ್ನು ರೂಪಿಸಬೇಕು ಎಂಬ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಿದ್ದು, ಈ ವರದಿಯನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ನೀಡಲಾಗುವುದು ಎಂದು ವರದಿ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸಮಿತಿ ಅಧ್ಯಕ್ಷ ವಿ.ಆರ್.ಸುದರ್ಶನ್, ಸಂಚಾಲಕ ಬಸವರಾಜ ರಾಯರೆಡ್ಡಿ ಅವರು ಮಂಗಳವಾರ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಿದರು. ಎಲ್ಲ 28 ಲೋಕಸಭೆ ಕ್ಷೇತ್ರಗಳಿಗೂ ಭೇಟಿ ನೀಡಿ, ಅಲ್ಲಿನ ಮುಖಂಡರು, ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿ, ವರದಿ ಸಿದ್ಧಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.