ADVERTISEMENT

ಕಾಂಚಾಣದ ಕರಾಮತ್ತು: ವರ್ಷದಲ್ಲಿ ಮಂಡ್ಯ ಜಿಲ್ಲೆಗೆ 350 ಗೌರವ ಡಾಕ್ಟರೇಟ್‌!

ಕೆ.ಆರ್‌.ಪೇಟೆಯಲ್ಲಿ ಅತ್ಯಧಿಕ ಪದವಿ ಪುರಸ್ಕೃತರು, ಐದು ಪದವಿ ಕೊಡಿಸಿದರೆ ಒಂದು ಉಚಿತ

ಎಂ.ಎನ್.ಯೋಗೇಶ್‌
Published 1 ಆಗಸ್ಟ್ 2019, 20:33 IST
Last Updated 1 ಆಗಸ್ಟ್ 2019, 20:33 IST
   

ಮಂಡ್ಯ: ಒಂದು ವರ್ಷದಿಂದ ಜಿಲ್ಲೆಯ 350ಕ್ಕೂ ಹೆಚ್ಚು ಮಂದಿ ₹ 30 ಸಾವಿರದಿಂದ ₹ 1 ಲಕ್ಷದವರೆಗೆ ನೀಡಿ ತಮಿಳುನಾಡು ಮೂಲದ ಖಾಸಗಿ ವಿಶ್ವವಿದ್ಯಾಲಯದಿಂದ ‘ಗೌರವ ಡಾಕ್ಟರೇಟ್‌’ ಪದವಿ ಪಡೆದಿದ್ದಾರೆ!

ಹೀಗೆ ಪದವಿ ಪಡೆದವರಲ್ಲಿ ರಾಜಕಾರಣಿಗಳು, ಕಲ್ಲು ಗಣಿ, ಪೆಟ್ರೋಲ್‌ ಬಂಕ್‌ ಮಾಲೀಕರು, ಗುತ್ತಿಗೆದಾರರು, ಉದ್ಯಮಿಗಳು, ಕಲಾವಿದರು, ಶಿಕ್ಷಕರು, ಪತ್ರಕರ್ತರು ಇದ್ದಾರೆ. ರಾಜ್ಯದ ಇತರ ಜಿಲ್ಲೆಗಳಿಗಿಂತಲೂ ಮಂಡ್ಯ ಜಿಲ್ಲೆಗೇ ಅತ್ಯಧಿಕ ಪದವಿ ಪ್ರದಾನಮಾಡಿರುವುದು ಕುತೂಹಲ ಮೂಡಿಸಿದೆ.

ಜುಲೈ 25ರಂದು ಬೆಂಗಳೂರಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾಲಯವು 130 ಮಂದಿಗೆ ಗೌರವ ಡಾಕ್ಟರೇಟ್‌ ನೀಡಿದೆ. ಅವರಲ್ಲಿ 32 ಮಂದಿ ಮಂಡ್ಯ ಜಿಲ್ಲೆಯವರು.12 ಮಂದಿ ಮಳವಳ್ಳಿ ತಾಲ್ಲೂಕಿಗೆ ಸೇರಿದ್ದಾರೆ. ಈವರೆಗೆ ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ 100ಕ್ಕೂ ಹೆಚ್ಚು ಜನ ಈ ಪದವಿ ಪಡೆದಿದ್ದಾರೆ. ನಾಗಮಂಗಲ, ಮಳವಳ್ಳಿ ತಾಲ್ಲೂಕು ನಂತರದ ಸ್ಥಾನ ಪಡೆದಿವೆ.

ADVERTISEMENT

‘ಆರು ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಬಂದು ಗೌರವ ಡಾಕ್ಟರೇಟ್‌ಗೆ ಅರ್ಜಿ ಹಾಕುವಂತೆ ತಿಳಿಸಿದರು. ಅದಾವುದೂ ಬೇಡ ಎಂದು ಬೈದು ಕಳುಹಿಸಿದೆ. ಆದರೆ, ಕಳೆದ ತಿಂಗಳು ಪ್ರಮಾಣ ಪತ್ರ ಮನೆಗೇ ಬಂದಿತ್ತು. ಜುಲೈ 25ರಂದು ಬೆಂಗಳೂರಿಗೆ ಬಂದು ಪದವಿ ಸ್ವೀಕರಿಸುವಂತೆ ಸೂಚಿಸಲಾಗಿತ್ತು. ಕುತೂಹಲ ತಡೆಯಲಾಗದೆ ಹೋದೆ. ಅಲ್ಲಿಯ ಅವ್ಯವಸ್ಥೆ ಕಂಡು ಬೇಸರವಾಯಿತು. ಹೋದ ತಪ್ಪಿಗೆ ನಾನೂ ಪದವಿ ಸ್ವೀಕರಿಸಿ ಪ್ರಮಾದವೆಸಗಿದೆ. ನಾನೆಂದೂ ಹೆಸರಿನ ಮುಂದೆ ಡಾಕ್ಟರ್‌ ಎಂದು ಹಾಕಿಕೊಳ್ಳುವುದಿಲ್ಲ’ ಎಂದು ಮಳವಳ್ಳಿಯ ಯೋಗ ತರಬೇತುದಾರ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಏಜೆಂಟರ ನೇಮಕ: ಬೇರೆಯವರಿಗೆ ಐದು ಪದವಿ ಕೊಡಿಸಿದರೆ ಒಂದು ಪದವಿಯನ್ನು ವಿ.ವಿಯು ಉಚಿತವಾಗಿ ನೀಡುತ್ತದೆ. ಅದಕ್ಕಾಗಿ ತಾಲ್ಲೂಕಿಗೆ ಒಬ್ಬರಂತೆ ಏಜೆಂಟರನ್ನು ನೇಮಕ ಮಾಡಿಕೊಂಡಿದೆ. ಆ ಏಜೆಂಟರು ಪತ್ರಕರ್ತರು, ವಿವಿಧ ಸಂಘಟನೆಗಳ ಮುಖ್ಯಸ್ಥರೇ ಆಗಿದ್ದಾರೆ. ಏಜೆಂಟರು ಪ್ರತಿಯೊಬ್ಬರಿಂದ ಲಕ್ಷದವರೆಗೆ ಹಣ ವಸೂಲಿ ಮಾಡಿದ್ದಾರೆ. ಆದರೆ, ವಿ.ವಿಗೆ ಕೇವಲ ₹ 20 ಸಾವಿರ ನೀಡಿ ಉಳಿದ ಹಣವನ್ನು ಜೇಬಿಗೆ ಇಳಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಜಿಲ್ಲೆಯ ಹಲವು ಕಲಾವಿದರಿಗೆ ಗೌರವ ಡಾಕ್ಟರೇಟ್‌ ಆಸೆ ತೋರಿಸಿ, ಹಣವಸೂಲಿ ಮಾಡಿ ವಂಚಿಸುತ್ತಿದ್ದಾರೆ. ತಮಿಳುನಾಡು ಮೂಲದ ಆ ವಿ.ವಿ ಮೂರು ಬಾರಿ ತನ್ನ ಹೆಸರು ಬದಲಾಯಿಸಿಕೊಂಡಿದೆ. ಬೆಂಗಳೂರು, ಪುದುಚೇರಿ ಹಾಗೂ ಪಣಜಿಯಲ್ಲಿ ಕಾರ್ಯಕ್ರಮ ನಡೆಸಿ ಪದವಿ ನೀಡುತ್ತಿದೆ. ಸರ್ಕಾರ ಈ ವಿ.ವಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಕಾರ್ಮಿಕ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಎಚ್ಚರಿಸಿದರು.

ಮಂಡ್ಯ ಜಿಲ್ಲೆಯ ವಿವಿಧೆಡೆ ಹಂಚಿಕೆಯಾಗಿರುವ ಖಾಸಗಿ ವಿಶ್ವವಿದ್ಯಾಲಯದ ಅರ್ಜಿ

ಕಲಾವಿದನಿಗೆ ₹ 1.15 ಲಕ್ಷ ವಂಚನೆ
ಗೌರವ ಡಾಕ್ಟರೇಟ್‌ ಪ್ರದಾನವಾದ ನಂತರ ಹಣ ವಾಪಸ್‌ ಬರುತ್ತದೆ ಎಂದು ಭರವಸೆ ನೀಡಿ ಮಂಡ್ಯದ ಪತ್ರಕರ್ತನೊಬ್ಬ ಮಳವಳ್ಳಿ ತಾಲ್ಲೂಕಿನ ಕಲಾವಿದರೊಬ್ಬರಿಂದ₹ 1.15 ಲಕ್ಷ ಪಡೆದು ವಂಚನೆ ಮಾಡಿದ್ದಾರೆ. ಪದವಿ ಬಂದು ಆರು ತಿಂಗಳಾದರೂ ಹಣ ವಾಪಸ್‌ ಬಂದಿಲ್ಲ. ಹೀಗಾಗಿ, ಅವರು ಪತ್ರಕರ್ತನ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹೆಸರಿನ ಹಿಂದೆ ‘ಡಾ.’ ಬೇಕು!
ಮಂಡ್ಯ ಜಿಲ್ಲೆಯ ವಿವಿಧ ಸಂಘಟನೆಗಳು ಪ್ರತಿ ವರ್ಷ 2 ಸಾವಿರ ಪ್ರಶಸ್ತಿ ನೀಡುತ್ತವೆ. ಪ್ರತಿ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಜನರು ಪ್ರಶಸ್ತಿ ಪುರಸ್ಕೃತರು ಇರುತ್ತಾರೆ. ಪ್ರಶಸ್ತಿ ಪಡೆಯುವಲ್ಲಿ ಅಪಾರ ಸ್ಪರ್ಧೆ ಇದೆ. ಈಗ ಅದೇ ರೀತಿ ಗೌರವ ಡಾಕ್ಟರೇಟ್‌ ಪಡೆಯುವಲ್ಲೂ ಸ್ಪರ್ಧೆ ಉಂಟಾಗಿದೆ. ಏಕೆ ಹೀಗೆ ಎಂದು ಪ್ರಶ್ನಿಸಿದಾಗ, ಹೆಸರಿನ ಹಿಂದೆ ‘ಡಾ.’ ಇರಬೇಕು ಎಂದು ಉತ್ತರಿಸುತ್ತಾರೆ.

‘ನಾನು ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದೇನೆ. ಅದಕ್ಕಾಗಿಯೇ ಗೌರವ ಡಾಕ್ಟರೇಟ್‌ ಪಡೆದಿದ್ದೇನೆ. ನನ್ನ ಹೆಸರಿನ ಹಿಂದೆ ‘ಡಾ.’ ಹಾಕಿಕೊಳ್ಳಲು ಸಂತೋಷವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾಟಾ ಆಪರೇಟರ್‌ ಆಗಿರುವ ಯುವಕರೊಬ್ಬರು ತಿಳಿಸಿದರು.

‘ನನ್ನ ಸೇವೆ, ಸಾಧನೆಗಳನ್ನು ಬೆಂಗಳೂರಿನ ನನ್ನ ಗೆಳೆಯರು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದರು. ಅದನ್ನು ಪರಿಗಣಿಸಿ ಗೌರವ ಡಾಕ್ಟರೇಟ್‌ ಕೊಟ್ಟಿದ್ದಾರೆ. ಅದಕ್ಕಾಗಿ ನನ್ನ ಕಾರಿನ ಮುಂದೆ ‘ಡಾ.ಎಂ.ಬಿ.ಶ್ರೀನಿವಾಸ್‌’ ಎಂದು ಬರೆಸಿದ್ದೇನೆ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ಬಿ.ಶ್ರೀನಿವಾಸ ಹೇಳಿದರು.

**
ಹಣ ಕೊಟ್ಟು ವಂಚನೆಗೆ ಒಳಗಾದವರು ದೂರು ನೀಡಿದರೆ ಕ್ರಮ ಜರುಗಿಸಲಾಗುವುದು. ದೂರು ನೀಡದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.
-ಶಿವಪ್ರಕಾಶ್‌ ದೇವರಾಜ್‌, ಎಸ್ಪಿ

**

ನಾನು ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದರಿಂದ ಗೌರವ ಡಾಕ್ಟರೇಟ್‌ ಪಡೆದಿದ್ದೇನೆ. ಹೆಸರಿನ ಹಿಂದೆ ‘ಡಾ.’ ಹಾಕಿಕೊಳ್ಳಲು ಸಂತೋಷವಾಗುತ್ತದೆ.
-ಡಾಟಾ ಆಪರೇಟರ್‌, ಜಿಲ್ಲಾಧಿಕಾರಿ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.