ADVERTISEMENT

ಮಂಡ್ಯದ ಮೈಶುಗರ್ ವಿದ್ಯುತ್ ಬಿಲ್ ಮನ್ನಾ: ಕಡತ ಮಂಡಿಸಲು ಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:23 IST
Last Updated 7 ಜುಲೈ 2024, 16:23 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಬಾಕಿಯನ್ನು ಮನ್ನಾ ಮಾಡುವ ಬಗ್ಗೆ ಪರಿಶೀಲಿಸಿ, ಕಡತ ಮಂಡಿಸುವಂತೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಮೈಶುಗರ್ ಸಕ್ಕರೆ ಕಾರ್ಖಾನೆಯ ಬಾಕಿ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವಂತೆ ಮುಖ್ಯಮಂತ್ರಿಗೆ ವಿಧಾನ ಪರಿಷತ್ ಕಾಂಗ್ರೆಸ್‌ ಸದಸ್ಯ ದಿನೇಶ ಗೂಳಿಗೌಡ ಅವರು ಮನವಿ ಸಲ್ಲಿಸಿದ್ದರು. ಬಿಲ್‌ ಮನ್ನಾ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ತರಲು ಕ್ರಮ ವಹಿಸುವಂತೆ ಕೂಡಾ ಮುಖ್ಯಮಂತ್ರಿ ಸೂಚಿಸಿದ್ದಾರೆ. 

ADVERTISEMENT

ಮನವಿ ಪತ್ರದಲ್ಲೇನಿತ್ತು?:

ಮಂಡ್ಯದ ರೈತರ ಜೀವನಾಡಿಯಾಗಿರುವ ಮೈ ಶುಗರ್ ಕಾರ್ಖಾನೆ ಕಳೆದ 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ₹ 52.25 ಕೋಟಿ ಬಾಕಿ ಪಾವತಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯು ಕಾರ್ಖಾನೆಗೆ ನೋಟಿಸ್ ನೀಡಿದೆ. ಇದರಿಂದ ಪಾರು ಮಾಡುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದ್ದು, ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಬಾಕಿ ಇರುವ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ದಿನೇಶ ಗೂಳಿಗೌಡ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.

‘ಹಲವು ಕಾರಣಗಳಿಂದಾಗಿ ಸ್ಥಗಿತವಾಗಿದ್ದ ಈ ಕಾರ್ಖಾನೆಯು ಕಳೆದ ವರ್ಷ ಕಾಂಗ್ರೆಸ್ ಸರ್ಕಾರದ ಮುತುವರ್ಜಿಯಿಂದ ಪುನರಾರಂಭಗೊಂಡಿತು. ಕಾರ್ಖಾನೆಯ ಪುನಶ್ಚೇತನಕ್ಕೆ ಸರ್ಕಾರ ₹ 50 ಕೋಟಿ ನೀಡಿದೆ. ಕಳೆದ ವರ್ಷ ಕಾರ್ಖಾನೆಯು ಮಂಡ್ಯದ ರೈತರು ಬೆಳೆದ 2.41 ಲಕ್ಷ ಟನ್ ಕಬ್ಬನ್ನು ನುರಿಸಲಾಗಿತ್ತು. ರೈತರಿಗೆ ಕಬ್ಬಿನ ಹಣ ಪಾವತಿಯಾಗಿದೆ. ಕಾರ್ಖಾನೆಯಿಂದ ರೈತರಿಗೆ ತುಂಬಾ ಅನುಕೂಲವಾಗುತ್ತಿದೆ. ಈ ವರ್ಷ ಕನಿಷ್ಠ 2.05 ಲಕ್ಷ ಟನ್ ಕಬ್ಬನ್ನು ನುರಿಸುವ ಸಂಬಂಧ ರೈತರು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಕೆಲವು ಅನಿವಾರ್ಯ ಕಾರಣಗಳಿಂದ ಕಾರ್ಖಾನೆಯ ವಿದ್ಯುತ್‌ ಬಿಲ್‌ ಕಟ್ಟಿಲ್ಲ. ಬಿಲ್‌ ಪಾವತಿಸಲು ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.