ನಾಗಮಂಗಲ (ಮಂಡ್ಯ ಜಿಲ್ಲೆ): ಪಟ್ಟಣದಲ್ಲಿ ಬುಧವಾರ ರಾತ್ರಿ ಗಣಪತಿ ಮೂರ್ತಿಯ ಮೆರವಣಿಗೆ ವೇಳೆ ನಡೆದಿದ್ದ ಕಲ್ಲುತೂರಾಟ, ಅಂಗಡಿ, ವಾಹನಗಳಿಗೆ ಬೆಂಕಿ ಹಚ್ಚಿದ ಕೃತ್ಯಗಳಿಗೆ ಸಂಬಂಧಿಸಿದಂತೆ ಹಿಂದೂ– ಮುಸ್ಲಿಂ ಸಮುದಾಯದ ಒಟ್ಟು 54 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ (ಸೆ.14) ಮಧ್ಯರಾತ್ರಿವರೆಗೆ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ‘ಬಿಗಿ ಭದ್ರತೆ ಏರ್ಪಡಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಎಸ್‌ಪಿ ತಿಳಿಸಿದ್ದಾರೆ.
ಗಲಭೆ ಕೃತ್ಯದ ಹಿನ್ನೆಲೆಯಲ್ಲಿ ಗುರುವಾರ ಶಾಲೆ–ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ‘ಪಟ್ಟಣದಲ್ಲಿ ಸದ್ಯದ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ’ ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಸಂಘಟನೆಗಳು ಗಲಭೆಯನ್ನು ಖಂಡಿಸಿ ಗುರುವಾರ ಪಟ್ಟಣ ಬಂದ್‌ಗೆ ಕರೆ ನೀಡಿದ್ದವು. ವ್ಯಾಪಾರಿಗಳು ವಹಿವಾಟು ಸ್ಥಗಿತಗೊಳಿಸಿ ಬೆಂಬಲ ನೀಡಿದರು.
ಗಲಭೆ ವೇಳೆ ಉದ್ರಿಕ್ತ ಯುವಕರ ಗುಂಪು ಹಚ್ಚಿದ ಬೆಂಕಿಯಿಂದ 20 ಅಂಗಡಿಗಳಿಗೆ ಹಾನಿಯಾಗಿದೆ. ಗ್ಯಾರೇಜ್‌ನಲ್ಲಿದ್ದ ದ್ವಿಚಕ್ರ ವಾಹನಗಳು ಮತ್ತು ರಸ್ತೆಬದಿ ನಿಲ್ಲಿಸಿದ್ದ ಕಾರು, ಬೈಕ್‌ಗಳು ಜಖಂಗೊಂಡಿವೆ. ಭೀಮ್ ರಾಜ್ ಎಂಬವವರ ಸಾಧನ ಟೆಕ್ಸ್‌ಟೈಲ್ಸ್ ಮಳಿಗೆ ಸಂಪೂರ್ಣ ಭಸ್ಮವಾಗಿದೆ. ಮಾಜಿ ಶಾಸಕ ಸುರೇಶಗೌಡ ನಿವಾಸ ಸೇರಿ ಹಲವರ ಮನೆ ಮೇಲೆ ಕಲ್ಲುತೂರಲಾಗಿದೆ.
ಕಾರಣವೇನು?: ‘ಪಟ್ಟಣದ ಬದ್ರಿಕೊಪ್ಪಲಿನ ಗಜಪಡೆ ಯುವಕ ಸಂಘದವರು ನಡೆಸುತ್ತಿದ್ದ ಗಣೇಶ ಮೂರ್ತಿಯ ಮೆರವಣಿಗೆಯು ಮೈಸೂರು ರಸ್ತೆಯ ಮಸೀದಿ ಬಳಿ ಬಂದಾಗ 150ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಯುವಕರು ಪಟಾಕಿ ಸಿಡಿಸಿ, ಕುಣಿಯುತ್ತಾ ‘ಜೈ ಶ್ರೀರಾಮ್’ ಘೋಷಣೆಯನ್ನು ಕೂಗಿದರು.
ಅದೇ ವೇಳೆ, ಸುತ್ತಮುತ್ತಲಿನ ಮುಸ್ಲಿಂ ಯುವಕರು ಗುಂಪುಗೂಡಿದ್ದು, ಪ್ರತಿಯಾಗಿ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದರು. ಇದು, ಉಭಯ ಗುಂಪಿನ ನಡುವಿನ ಮಾತಿನ ಚಕಮಕಿ ಕಾರಣವಾಗಿ, ನಂತರ ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು.
‘ಇದೇ ವೇಳೆ ಗುಂಪೊಂದು ಕಲ್ಲು ತೂರಾಟ ನಡೆಸಿತು. ‘ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿ ಯನ್ನು ಹತೋಟಿಗೆ ತರಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಎರಡೂ ಗುಂಪಿನವರು ಗಲಭೆ ಉಂಟುಮಾಡಲೆಂದೇ ಮಾರಕಾಸ್ತ್ರ, ಕಬ್ಬಿಣದ ಸರಳು, ಕಲ್ಲು, ದೊಣ್ಣೆಗಳನ್ನು ಹಿಡಿದು ಪ್ರಚೋದನಾತ್ಮಕ ಘೋಷಣೆ ಕೂಗಿದರು’ ಎಂದು ದೂರು ದಾಖಲಾಗಿದೆ.
ಗುರುವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ‘ಆಕಸ್ಮಿಕ ಘಟನೆಯು ಗಲಭೆಗೆ ಕಾರಣವಾಗಿದೆ. ಕೋಮು ಸೌಹಾರ್ದ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
‘ಹಾನಿಗೊಳಗಾದ ಅಂಗಡಿ ಹಾಗೂ ಮನೆಗಳ ನಷ್ಟ ಅಂದಾಜಿಸಲಾಗುತ್ತಿದೆ. ಮಾಲೀಕರಿಗೆ ನ್ಯಾಯ ಒದಗಿಸುವುದು ನಮ್ಮ ಹೊಣೆ. ಘಟನೆಯನ್ನು ರಾಜಕೀಯವಾಗಿ ಬಳಸದೇ ವಿರೋಧ ಪಕ್ಷಗಳು ಜವಾಬ್ದಾರಿಯಿಂದ ವರ್ತಿಸಬೇಕು’ ಎಂದು ಪ್ರತಿಕ್ರಿಯಿಸಿದರು.
ಪೆಟ್ರೋಲ್ ಬಾಂಬ್ ಬಳಕೆ?: ‘ಪೆಟ್ರೋಲ್ ಬಾಂಬ್ ಬಳಸಿ ಅಂಗಡಿ, ಶೋರೂಂಗಳಿಗೆ ಬೆಂಕಿ ಹಚ್ಚಲಾಗಿದೆ’ ಎಂದು ವ್ಯಾಪಾರಿಗಳು ದೂರಿದರು. ಆದರೆ, ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ‘ಸರ್ಕಾರ ನಿರ್ದಿಷ್ಟ ಸಮುದಾಯವರ ಓಲೈಕೆಯನ್ನು ನಿಲ್ಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮಾಜಿ ಶಾಸಕ ಸುರೇಶಗೌಡಆಗ್ರಹಿಸಿದ್ದಾರೆ.
ನ್ಯಾಯಾಂಗ ಬಂಧನ: ಬಂಧಿತ 54 ಆರೋಪಿಗಳನ್ನು ಸ್ಥಳೀಯ ಕೋರ್ಟ್ ಸೆ.25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲು ತೂರಾಟ ಕಿಡಿಗೇಡಿಗಳ ದುಷ್ಕೃತ್ಯ. ದುರುಳರು ಯಾವುದೇ ಧರ್ಮದವರಾಗಿರಲಿ ಕ್ರಮ ಕೈಗೊಳ್ಳಲಾಗುವುದು.–ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾಂಗ್ರೆಸ್ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ನಿರ್ದಿಷ್ಟ ಸಮುದಾಯವನ್ನು ತುಷ್ಟೀಕರಣ ಮಾಡಿದ್ದಕ್ಕಾಗಿ ಈ ಹೇಯ ಘಟನೆ ನಡೆದಿದೆ.– ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಭಾರಿ ಕೈಗಾರಿಕೆ ಸಚಿವ
ಗಣಪತಿ ಮೆರವಣಿಗೆಗೆ ಅನುಮತಿ ನೀಡಿ, ಭದ್ರತೆ ನೀಡಿದ್ದೆವು. ಎರಡೂ ಕಡೆಯವರು ಕಲ್ಲು ತೂರಾಟ ನಡೆಸಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮೆರಾ ಪರಿಶೀಲನೆ ನಡೆದಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.–ಮಲ್ಲಿಕಾರ್ಜುನ ಬಾಲದಂಡಿ, ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ
ಎರಡು ಕೋಮಿನವರು ಮಚ್ಚು, ಲಾಂಗ್, ದೊಣ್ಣೆ, ಕಲ್ಲುಗಳನ್ನು ತೆಗೆದುಕೊಂಡು ನಮ್ಮನ್ನು ಕೊಲೆ ಮಾಡಲೆಂದೇ ಓಡಿಸಿಕೊಂಡು ಬಂದರು. ಘಟನೆಯಲ್ಲಿ ನನಗೆ, ಇಬ್ಬರು ಕಾನ್‌ಸ್ಟೆಬಲ್‌ಗಳಿಗೆ ಗಾಯಗಳಾಗಿವೆ.–ರವಿ ಬಿ.ಜೆ, ಪಿಎಸ್‌ಐ, ನಾಗಮಂಗಲ ಠಾಣೆ
27 ವರ್ಷಗಳಿಂದ ನಾವು ಗಣೇಶನ ಮೂರ್ತಿ ಕೂರಿಸುತ್ತಿದ್ದೇವೆ. ಬೇರೆ ಕೋಮಿನವರು ಮಾಡಿದ ತಪ್ಪಿಗೆ, ಗಣಪತಿ ಮೂರ್ತಿ ಕೂರಿಸಿದ್ದ ಹುಡುಗರನ್ನು ಏಕೆ ಪೊಲೀಸರು ಬಂಧಿಸಿದ್ದಾರೆ?–ಬದ್ರಿಕೊಪ್ಪದ ಮಹಿಳೆಯರು, ನಾಗಮಂಗಲ
ಬಟ್ಟೆ ಶೋರೂಂಗೆ ಬೆಂಕಿ ಹಚ್ಚಿದ್ದರಿಂದ ಕೋಟ್ಯಂತರ ನಷ್ಟವಾಗಿದೆ. ಕೆಲಸಕ್ಕಿದ್ದ 7 ಕಾರ್ಮಿಕರೊಂದಿಗೆ ಬೀದಿಗೆ ಬಿದ್ದಿದ್ದೇನೆ. ಸರ್ಕಾರ ನೆರವು ನೀಡಬೇಕು.–ಭೀಮರಾಜ್, ಮಾಲೀಕ, ಸಾಧನ ಟೆಕ್ಸ್‌ಟೈಲ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.