ಮಂಡ್ಯ: ‘ಸಕ್ಕರೆ ನಾಡು’ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದ ಹೊರವಲಯದಲ್ಲಿ ಸುಮಾರು 100 ಎಕರೆ ವಿಶಾಲವಾದ ಸ್ಥಳವನ್ನು ಅಂತಿಮಗೊಳಿಸಲಾಗಿದೆ.
ಸಮ್ಮೇಳನಕ್ಕಾಗಿ ಗುರುತಿಸಿರುವ ಅಮರಾವತಿ ಹೋಟೆಲ್ ಮತ್ತು ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಜಾಗವು ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿದ್ದು, ಹೊರಜಿಲ್ಲೆಗಳಿಂದ ಬರುವವರಿಗೆ ಅನುಕೂಲವಾಗಲಿದೆ. ವಾಹನಗಳ ನಿಲುಗಡೆಗೂ ಸಾಕಷ್ಟು ಸ್ಥಳಾವಕಾಶವಿದೆ. ಬಹುತೇಕ ಸಮತಟ್ಟಾದ ಹಾಗೂ ಗಟ್ಟಿ ನೆಲದಿಂದ ಕೂಡಿರುವುದರಿಂದ ಸಮ್ಮೇಳನಕ್ಕೆ ಸೂಕ್ತ ಜಾಗ ಎಂಬ ನಿರ್ಣಯಕ್ಕೆ ಬರಲಾಗಿದೆ. ಮಂಡ್ಯ– ನಾಗಮಂಗಲ ರಸ್ತೆಯ ಚಿಕ್ಕಮಂಡ್ಯ ಭಾಗದಲ್ಲಿರುವ ಗದ್ದೆಯ ಬಯಲು ಪ್ರದೇಶವನ್ನು ಕೈಬಿಡಲಾಗಿದೆ.
‘ಪ್ರಧಾನ ವೇದಿಕೆ, ಎರಡು ಸಮಾನಾಂತರ ವೇದಿಕೆಗಳು, ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳು, ಊಟದ ವ್ಯವಸ್ಥೆ ಮತ್ತು ವಸ್ತುಪ್ರದರ್ಶನವನ್ನು ಒಂದೇ ಸ್ಥಳದಲ್ಲಿ ಏರ್ಪಡಿಸಲು ಅನುಕೂಲವಾಗಲಿದೆ. ಹೆಚ್ಚುವರಿ ಜಾಗ ಬೇಕೆಂದರೆ ವಿಸ್ತರಣೆಗೂ ಅವಕಾಶವಿದೆ’ ಎಂದು ಪರಿಷತ್ತಿನ ಪದಾಧಿಕಾರಿಗಳು ತಿಳಿಸಿದರು.
₹30 ಕೋಟಿಗಿಂತ ಹೆಚ್ಚಿಲ್ಲ
‘ನುಡಿಜಾತ್ರೆಗೆ ₹30 ಕೋಟಿ ಅನುದಾನವನ್ನು ಸರ್ಕಾರದಿಂದ ಒದಗಿಸಲಾಗುವುದು. ಅದರ ಮಿತಿಯೊಳಗೆ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕು. ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸುವಂತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
28 ಸಮಿತಿಗಳ ರಚನೆ
ಸ್ವಾಗತ, ಹಣಕಾಸು ಮತ್ತು ಲೆಕ್ಕ ಪರಿಶೋಧನೆ, ವೇದಿಕೆ ನಿರ್ಮಾಣ, ಆಹಾರ, ವಸತಿ, ಸಾಂಸ್ಕೃತಿಕ, ಪ್ರಚಾರ, ಸ್ಮರಣ ಸಂಚಿಕೆ, ಮೆರವಣಿಗೆ, ನಗರ ಅಲಂಕಾರ, ಸಾರಿಗೆ, ಪುಸ್ತಕ ಆಯ್ಕೆ ಹಾಗೂ ಮಹಿಳಾ ಸಮಿತಿ ಸೇರಿದಂತೆ 28 ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮಹಾಪೋಷಕರನ್ನಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಧಾನ ಪೋಷಕರನ್ನಾಗಿ ನಿಯೋಜಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೋಷಕರಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.
ಚಲುವರಾಯಸ್ವಾಮಿ ಅಧ್ಯಕ್ಷರಾಗಿ, ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಹಾಗೂ ಆಯ್ದ ಸಚಿವರು ಮತ್ತು ಶಾಸಕರಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿದೆ.
ಮಂಡ್ಯಕ್ಕೆ ಕೀರ್ತಿ ತಂದವರಿಗೆ ಸನ್ಮಾನ
‘ಜಿಲ್ಲೆಯಲ್ಲಿ ಹುಟ್ಟಿ, ಬೇರೆ ರಾಜ್ಯ ಮತ್ತು ವಿದೇಶಗಳಲ್ಲಿ ವಾಸಿಸುತ್ತಿದ್ದು, ಕಾರ್ಯಕ್ಷಮತೆಯಿಂದ ಜಿಲ್ಲೆಗೆ ಖ್ಯಾತಿ ತಂದುಕೊಟ್ಟವರ ಹೆಸರು, ದೂರವಾಣಿ ಸಂಖ್ಯೆಯನ್ನು ತಿಳಿಸಲು ಕೋರುತ್ತೇನೆ. ಅಂಥವರನ್ನು ಸಮ್ಮೇಳನದಲ್ಲಿ ಗೌರವಿಸುವ ಉದ್ದೇಶವಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಮನವಿ ಮಾಡಿದ್ದಾರೆ.
ಸೆ.22ಕ್ಕೆ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ
‘ಸಾಹಿತ್ಯ ಸಮ್ಮೇಳನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆ, ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಕ್ಷೇತ್ರದ ಭುವನೇಶ್ವರಿ ಸನ್ನಿಧಿಯಿಂದ ಸೆ.22ರಂದು ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಾಗುವುದು’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
‘87ನೇ ಸಮ್ಮೇಳನವಾಗಿರುವುದರಿಂದ ರಥಯಾತ್ರೆಯು ಅಷ್ಟು ದಿನ ರಾಜ್ಯಾದಾದ್ಯಂತ ಸಂಚರಿಸಿ, ಜನಜಾಗೃತಿ ಮೂಡಿಸುವ ಜೊತೆಗೆ ಆಹ್ವಾನ ನೀಡಲಿದೆ. ಭುವನಗಿರಿಯ ಸನ್ನಿಧಿಯಲ್ಲಿ ಹಚ್ಚುವ ಕನ್ನಡ ದೀಪದಿಂದಲೇ ಸಮ್ಮೇಳನವನ್ನು ಉದ್ಘಾಟಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಾದ್ಯಂತ ರಥ ಸಂಚಾರ
‘ಒಂದು ರಥ ರಾಜ್ಯದಾದ್ಯಂತ ಸಂಚರಿಸಿದರೆ, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತೊಂದು ರಥ ಸಂಚರಿಸಲಿದೆ. ನವೆಂಬರ್ 15ರಂದು ಜಿಲ್ಲೆಯ ನಿಮಿಷಾಂಬ ದೇಗುಲದಿಂದ ಹೊರಡುವ ರಥವು ಜಿಲ್ಲೆಯ 45 ಹೋಬಳಿಗಳ 233 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ’ ಎಂದು ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.