ಮಂಗಳೂರು:ಇಲ್ಲಿನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ರನ್ ವೇ ನಿಂದ ಹೊರಹೋಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಟರ್ಮಿನಲ್ ಬಳಿಯ ಹ್ಯಾಂಗರ್‌ಗೆ ತಂದೊಯ್ದು ನಿಲ್ಲಿಸಲಾಗಿದೆ. ಇತರ ವಿಮಾನಗಳ ಹಾರಾಟವು ಬೆಳಿಗ್ಗೆಯಿಂದಲೇ ಎಂದಿನಂತೆ ಮುಂದುವರಿದಿದೆ.
‘ವಿಮಾನವನ್ನು ಘಟನಾ ಸ್ಥಳದಿಂದ ತೆಗೆದಿದ್ದು, ಇತರ ವಿಮಾನಗಳ ಹಾರಾಟಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಈ ಘಟನೆ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ. ಅದು ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ.ರಾವ್ ತಿಳಿಸಿದರು.
‘ಘಟನೆಯಿಂದ ವಿಳಂಬವಾಗಿದ್ದ ಇತರ ವಿಮಾನಗಳ ಹಾರಾಟಗಳೂ ಪೂರ್ಣಗೊಂಡಿವೆ. ಸೋಮವಾರದ ಕಾರ್ಯಾಚರಣೆಯು ಯಥಾಸ್ಥಿತಿಯಲ್ಲಿ ನಡೆದಿದೆ’ ಎಂದರು.
‘ವಿಮಾನಕ್ಕೆ ಯಾವುದೇ ಭಾರಿ ಹಾನಿ ಸಂಭವಿಸಿಲ್ಲ. ಸಣ್ಣಪುಟ್ಟ ದುರಸ್ತಿಗಳನ್ನು ಇನ್ನೆರಡು ದಿನಗಳಲ್ಲಿ ನಡೆಸಲಾಗುವುದು. ಪರ್ಯಾಯವಾಗಿ ಬೇರೆ ವಿಮಾನವನ್ನು ನೀಡಲಾಗಿದ್ದು, ಹಾರಾಟ ಆರಂಭಗೊಂಡಿದೆ. ಏರ್ ಇಂಡಿಯಾದಿಂದಲೂ ತನಿಖೆ ನಡೆಯಲಿದೆ’ ಎಂದು ಏರ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
‘ಮಾನವ ಸಹಜ ದೋಷ ಅಥವಾ ವಿಮಾನದ ತಾಂತ್ರಿಕ ದೋಷದಿಂದಾಗಿ ವಿಮಾನವು ರನ್ ವೇನಿಂದ ಹೊರ ಹೋಗಿರಬಹುದೇ ಹೊರತು, ವಿಮಾನ ನಿಲ್ದಾಣದಲ್ಲಿ ಅಂತಹ ಸಮಸ್ಯೆಗಳು ಕಂಡುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಶೀಘ್ರವೇ ಸ್ಪಷ್ಟಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
‘ವಿಮಾನ ನಿಲ್ದಾಣವು ಯಥಾಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸುರಕ್ಷತೆಯ ಬಗ್ಗೆ ಯಾವುದೇ ಭಯ ಬೇಡ. ಹಿರಿದಾದ ವಿಮಾನಗಳೂ ಇಳಿಯಲು ಅನುಕೂಲವಾಗುವಂತೆ ರನ್ ವೇ ವಿಸ್ತರಿಸುವ ಸಲುವಾಗಿ ರಾಜ್ಯ ಸರ್ಕಾರವು ಭೂಮಿ ನೀಡಲಿದೆ. ಆದರೆ, ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಯೇ ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದರು.
ದುಬೈನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (ಐಎಎಕ್ಸ್–384) ವಿಮಾನವು ಇಲ್ಲಿನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ರನ್ ವೇ ಯಿಂದ ಟ್ಯಾಕ್ಸಿ ವೇ ಪ್ರವೇಶಿಸುವ ಸಂದರ್ಭ ಹೊರಹೋಗಿದ್ದು, ಚಕ್ರವು ಮಣ್ಣಿನಲ್ಲಿ ಹೂತಿತ್ತು. ಕೆಲಕಾಲ ಆತಂಕ ಮೂಡಿಸಿತ್ತು. ವಿಮಾನದಲ್ಲಿ 183 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ಸೇರಿದಂತೆ ಒಟ್ಟು 189 ಜನರಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.