ಮಂಗಳೂರು: ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್‌ನನ್ನು ಶುಕ್ರವಾರ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಸ್ಥಳದ ಮಹಜರು ನಡೆಸಲಾಯಿತು. ಗುರುವಾರ ನ್ಯಾಯಾಲಯವು ಆರೋಪಿಯನ್ನು 10 ದಿನ ಪೊಲೀಸ್ ವಶಕ್ಕೆ ನೀಡಿದೆ.
10 ದಿನದಲ್ಲಿಯೇ ವಿಚಾರಣೆ ಪೂರ್ಣಗೊಳಿಸುವ ಅನಿವಾರ್ಯತೆ ಎದುರಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡ, ಬಾಂಬ್ ಇರಿಸಿದ್ದ ಸ್ಥಳವಾದ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ, ಆತ ಕೆಲಸ ಮಾಡಿದ್ದ ಹೋಟೆಲ್‌ಗಳಿಗೆ ಶುಕ್ರವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದೆ.
ತಾನು ಮೊದಲು ಬಂದು ಇಳಿದ ಸ್ಥಳದ ಬಗ್ಗೆ ಮಾಹಿತಿ ನೀಡಿದ ಆದಿತ್ಯರಾವ್, ಬಳಿಕ ಎಂಟ್ರಿ ಗೇಟ್ ಮೂಲಕ ಒಳಪ್ರವೇಶಿಸಿದ್ದು, ಸ್ಫೋಟಕದ ಬ್ಯಾಗ್ ಇರಿಸಿದ್ದ ಕಬ್ಬಿಣದ ಕುರ್ಚಿ ಎಲ್ಲವನ್ನೂ ತೋರಿಸಿದ್ದಾನೆ. ಬಳಿಕ ಎಸ್ಕಲೇಟರ್ ಮೂಲಕ ಇಳಿದು ಹೊರಗೆ ಬಂದಿದ್ದು, ಅಲ್ಲಿಂದ ಅವಸರದಲ್ಲಿ ಎಕ್ಸಿಟ್ ಗೇಟ್ ಬಳಿ ಸಿಕ್ಕ ರಿಕ್ಷಾ ಹತ್ತಿ ಹೊರಟು ಬಂದಿದ್ದಾಗಿ ಮಾಹಿತಿ ನೀಡಿದ್ದಾನೆ.
ಸ್ಫೋಟಕ ಇರಿಸಿದ ಬಗ್ಗೆ ಅದಿತ್ಯರಾವ್‌ನಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ ಪೊಲೀಸರು, ಮತ್ತೊಂದು ಬ್ಯಾಗ್ ಇರಿಸಿದ್ದ ಕೆಂಜಾರಿನ ಸಲೂನ್ ಬಳಿ ಆತನನ್ನು ಕರೆದೊಯ್ದಿದ್ದಾರೆ. ಸ್ಫೋಟಕ ಇರಿಸುವ ಮುನ್ನ ಕೆಲಸ ಮಾಡಿದ್ದ ಕುಡ್ಲ ಹೋಟೆಲ್ ಹಾಗೂ ಕಾರ್ಕಳದ ಕಿಂಗ್ಸ್ ಬಾರ್‌ಗೂ ಕರೆದೊಯ್ದು ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.
ಪಶ್ಚಾತ್ತಾಪ, ಭಯವೂ ಇಲ್ಲ
ಆರೋಪಿ ಆದಿತ್ಯರಾವ್‌ನಿಗೆ ತಾನು ಎಸಗಿರುವ ಕೃತ್ಯದ ಬಗ್ಗೆ ಪಶ್ಚಾತ್ತಾಪವಾಗಲಿ, ಭಯವಾಗಲಿ ಇಲ್ಲ ಎಂದು ವಿಚಾರಣೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವುದೇ ಆತಂಕ, ಭಯವಿಲ್ಲದೇ ತಾನು ಸ್ಫೋಟಕ ಇರಿಸಿದ್ದಾಗಿ ಹೇಳಿದ್ದಾನೆ. ಎಲ್ಲ ಕೃತ್ಯಗಳಲ್ಲಿ ತಾನೊಬ್ಬನೇ ಇರುವುದಾಗಿ ಒಪ್ಪಿಕೊಂಡಿದ್ದಾನೆ. ಸ್ಥಳ ಮಹಜರಿನಲ್ಲೂ ಯಾವುದೇ ಭಯವಿಲ್ಲದೇ ತಾನು ಭೇಟಿ ನೀಡಿದ್ದ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.