ಮಂಗಳೂರು: ಚರ್ಚ್‌ಗಳ ಈ ಮತಾಂತರಕ್ಕೆ ಅಡ್ಡಿಯಾಗುತ್ತಿರುವ ಕಾರಣಕ್ಕೆ ಖಾಪ್ ಪಂಚಾಯಿತಿ ವಿರುದ್ಧ ಅಮೆರಿಕದ ಇವಾಂಜಲಿಕಲ್ ಗ್ರೂಪ್ ಪ್ರಾಯೋಜಿತ ಎನ್‌ಜಿಒ ಸಮರ ಸಾರಿತು ಎಂದು ಸ್ತ್ರೀವಾದಿ ಚಿಂತಕಿ ಮಧುಕೀಶ್ವರ್ ಹೇಳಿದರು.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ನಡೆದ ‘ಮಂಗಳೂರು ಲಿಟ್ ಫೆಸ್ಟ್’ನಲ್ಲಿ ‘ದ ಸೆಲೆಕ್ಟಿವ್ ಔಟ್‌ರೇಜ್..’ ವಿಷಯದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ ಅವರು, ಮರ್ಯಾದಾ ಹತ್ಯೆಯ ವಿರುದ್ಧ ಅಮೆರಿಕದ ಇವಾಂಜಲಿಕಲ್ ಗ್ರೂಪ್‌ನ ಮಸ್ಟರ್‌ಡ್ ಸೀಡ್ ಫೌಂಡೇಶನ್ ಎಂಬ ಎನ್‌ಜಿಒ 2010ರಲ್ಲಿ ಪ್ರಕರಣವೊಂದನ್ನು ಸುಪ್ರೀಂ ಕೋರ್ಟ್‌ನಲ್ಲಿ ಕೇಸು ದಾಖಲಿಸಿತು. ಹತ್ಯೆಯನ್ನು ನಡೆಸಿದ ಆರೋಪಿಗಳನ್ನು ಶಿಕ್ಷಿಸಲು ನಮ್ಮಲ್ಲಿ ಸಮರ್ಥ ಕಾನೂನು ಇರುವಾಗ ಖಾಪ್ ಪಂಚಾಯಿತಿಯನ್ನೇ ಗುರಿ ಮಾಡಿ ಈ ಪ್ರಕರಣ ದಾಖಲಿಸುವ ಹಿಂದೆ ಬೇರೆಯೇ ಹುನ್ನಾರವಿದೆ. ‘ಖಾಪ್’ ಎಂಬುದು ಪುರಾತನವಾದ ನ್ಯಾಯಾಂಗ ವ್ಯವಸ್ಥೆ. ಹರ್ಯಾಣ, ಪಂಜಾಬಿನಲ್ಲಿ ಬೃಹತ್ ಪ್ರಮಾಣದ ಮತಾಂತರ ನಡೆಯುತ್ತಿದ್ದು, ಈ ದಾರಿಗೆ ಖಾಪ್ ವ್ಯವಸ್ಥೆ ಅಡ್ಡ ಬರುತ್ತಿದೆ. ಖಾಪ್‌ಗಳನ್ನು ನಿಯಂತ್ರಿಸಲು ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕಾನೂನು ಆಯೋಗಕ್ಕೆ ಸೂಚಿಸಿದಾಗ, ಆಯೋಗದ ಸದಸ್ಯರು ಖಾಪ್‌ಗಳನ್ನು ಸಂಪರ್ಕಿಸಲೇ ಇಲ್ಲ. ಒಂದು ಸಮುದಾಯದ ವ್ಯವಸ್ಥೆಯ ವಿರುದ್ಧ ಕಾನೂನು ರೂಪಿಸುವಾಗ ಅವರ ಮಾತುಗಳನ್ನ ಕೇಳದೇ ಇರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಜಮ್ಮುವಿನ ಕಠುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಸುಳ್ಳು ಪ್ರಚಾರಗಳನ್ನು ಮಾಡಲಾಯಿತು. ಬಾಲಕಿಯ ಕುಟುಂಬದವರು ಈ ಘಟನೆಯಲ್ಲಿ ಭಾಗಿಯಾಗಿದ್ದರೂ ‘ ಹಿಂದೂ ಪವಿತ್ರ ಕ್ಷೇತ್ರದಲ್ಲಿ ಜಮ್ಮುವಿನ ಡೋಗ್ರಾ ಸಮುದಾಯದವರಿಂದ ಈ ಘಟನೆ ನಡೆಯಿತು’ ಎಂಬಂತೆ ಬಿಂಬಿಸಿ ಪ್ರಚಾರ ನೀಡಲಾಯಿತು. ಮೃತದೇಹ ಬಿಡುಗಡೆ ಆದ ಕೂಡಲೇ ಆರೋಪಿಗಳ ಹೆಸರುಗಳನ್ನು ಉಲ್ಲೇಖಿಸಿ ಕ್ಷಣಾರ್ಧದಲ್ಲಿ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ವಿದೇಶಗಳಲ್ಲಿ ಈ ಸುದ್ದಿಬಂತು. ಇಡೀ ಡೋಗ್ರಾ ಸಮುದಾಯ, ಅಷ್ಟೇ ಏಕೆ ಹಿಂದೂ ಸಮುದಾಯದ ಮೇಲೆಯೇ ಈ ಘಟನೆಯನ್ನು ಹೇರಿ ಸುಳ್ಳು ಪ್ರಚಾರ ಮಾಡಲಾಯಿತು ಎಂದು ಅವರು ವಿವರಿಸಿದರು.
ಈ ಎಲ್ಲ ವಿಚಾರಗಳನ್ನು ಅಧ್ಯಯನ ನಡೆಸಿ ಪುಸ್ತಕವೊಂದನ್ನು ಬರೆಯುತ್ತಿದ್ದೇನೆ. ಆದರೆ ಒಂದಂತೂ ಸತ್ಯ. ಚಿಕ್ಕ ಸಮುದಾಯ ನಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಅವರು ಹೇಳಿದಂತೆ ಕೇಳಿದರೆ ನಾವು ಒಳ್ಳೆಯವರು. ನಮ್ಮದೇ ಜೀವನ ಶೈಲಿಯಲ್ಲಿ ಬದುಕಲು ಬಿಡಿ ಎಂದು ಹೇಳಿದ ತಕ್ಷಣ ಅವರ ಹಕ್ಕುಗಳನ್ನೇ ಪ್ರಶ್ನಿಸಿದಂತಾಗಿ ಅಸಹಿಷ್ಣುಗಳಾಗಿಬಿಡುತ್ತೇವೆ ಎಂಬುದು ವಿಪರ್ಯಾಸವಲ್ಲದೇ ಮತ್ತೇನು ಎಂದು ಅವರು ಪ್ರಶ್ನಿಸಿದರು.
ಕೆಲವೇ ವಿಚಾರಗಳನ್ನು ಆಯ್ಕೆ ಮಾಡಿ ಅವುಗಳ ವಿರುದ್ಧ ಪ್ರತಿಭಟಿಸುವುದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಪ್ರಕಾಶ್ ಬೆಳವಾಡಿ, ಆನಂದ್ ರಂಗನಾಥನ್, ಶೆಫಾಲಿ ವೈದ್ಯ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.