ADVERTISEMENT

ಮಂಗಳೂರು ಬಾಂಬ್ ಪತ್ತೆ ಪ್ರಕರಣ: ರಾಜ್ಯದಾದ್ಯಂತ ಹೈ ಅಲರ್ಟ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 12:39 IST
Last Updated 20 ಜನವರಿ 2020, 12:39 IST
ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ ರಾಜ್ಯದಲ್ಲಿ ಬಿಗಿಭದ್ರತೆ
ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ ರಾಜ್ಯದಲ್ಲಿ ಬಿಗಿಭದ್ರತೆ   

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಬೆಂಗಳೂರು ಮೆಟ್ರೋ, ವಿಧಾನಸೌಧ, ವಿಕಾಸ ಸೌಧ, ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ರೈಲು, ಬಸ್ ನಿಲ್ದಾಣಗಳಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ವಿಮಾನ ನಿಲ್ದಾಣದ ಪ್ರವೇಶದ್ವಾರವೂ ಸೇರಿದಂತೆ ಎಲ್ಲ ಕಡೆ ಶ್ವಾನದಳ, ಬಾಂಬ್ ಪತ್ತೆ ದಳದ ಸಿಬ್ಬಂದಿಯಿಂದತಪಾಸಣೆ ಹೆಚ್ಚಿಸಲಾಗಿದೆ. ಪ್ರಯಾಣಿಕರು ಮತ್ತು ಅವರ ಜೊತೆ ಬರುವವರ ಚಲನವಲನಗಳ ಮೇಲೆ ನಿವಾ ವಹಿಸಲಾಗಿದೆ ಎಂದು ಭದ್ರತೆಯ ಉಸ್ತುವಾರಿ ವಹಿಸಿರುವ ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ಪ್ರಯಾಣಿಕರ ಬಳಿ ಇರುವ ಬ್ಯಾಗ್‌, ಲಗೇಜುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಅನುಮಾನಾಸ್ಪದ ವಸ್ತುಗಳನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಭದ್ರತೆಗೆ ಸಿಬ್ಬಂದಿ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದೂ ಅವರು ತಿಳಿಸಿದರು.

ADVERTISEMENT

ಹುಬ್ಬಳ್ಳಿ ವರದಿ: ಬಾಂಬ್ ಪತ್ತೆ ಪ್ರಕರಣದಿಂದಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಸುತ್ತ ಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ.ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಸ್‌ಐಎಸ್‌ಎಫ್‌), ಕರ್ನಾಟಕ ಪೊಲೀಸ್‌ ಹಾಗೂ ಖಾಸಗಿ ಸಿಬ್ಬಂದಿಯೆಂದು ಅಂದಾಜು 150ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಿಲ್ದಾಣದ ಆವರಣ ಪ್ರವೇಶಿಸುವ ಪ್ರಮುಖ ದ್ವಾರದಲ್ಲಿ ಮೆಟಲ್‌ ಡಿಟೆಕ್ಟರ್‌ ಅಳವಡಿಸಿ, ಪ್ರಯಾಣಿಕರನ್ನು ಒಳಗೆ ಬಿಡಲಾಗುತ್ತಿದೆ. ಪ್ರತಿಯೊಂದು ವಾಹನಗಳ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಪ್ರಯಾಣಿಕರ ಗುರುತು ಪತ್ರ, ವಿಳಾಸ, ಫೋಟೋ, ಟಿಕೆಟ್‌ಗಳನ್ನು ಕೂಲಕಂಷವಾಗಿ ಪರಿಶೀಲನೆ ನಡೆಸಿ ಒಳಗೆ ಬಿಡಲಾಗುತ್ತಿದೆ.

ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಅವರು, ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ವಿಮಾನ ನಿಲ್ದಾಣದ ನಿರ್ದೇಶಕರ ಜೊತೆ ಭದ್ರತೆ ಕುರಿತು ಚರ್ಚಿಸಿದರು. ನಿಲ್ದಾಣದ ಟರ್ಮಿನಲ್‌ ಪ್ರವೇಶಿಸುವವರೆಗ ಮೂರು ಹಂತದಲ್ಲಿ ಪ್ರಯಾಣಿಕರನ್ನು ಹಾಗೂ ಬ್ಯಾಗ್‌ಗಳನ್ನು ಕೂಲಕಂಷವಾಗಿ ಪರಿಶೀಲಿಸಬೇಕು ಎಂದು ಭದ್ರತಾ ಸಿಬ್ಬಂದಿಗೆ ಸೂಚಿಸಿದರು.

ಈ ಕುರಿತು 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌, ‘ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವುದು ಕಂಡು ಬಂದರೆ, ತಕ್ಷಣ ವಶಕ್ಕೆ ಪಡೆಯಬೇಕು ಎಂದು ಸೂಚನೆ ನೀಡಿದ್ದೇನೆ’ ಎಂದರು.

ಬಸ್‌ ನಿಲ್ದಾಣ, ಮಾರುಕಟ್ಟರ ಪ್ರದೇಶ, ಮಾಲ್‌ಗಳಲ್ಲಿಯೂ ಭದ್ರತೆ ಹಾಕಲಾಗಿದೆ. ಸಂಬಂಧಪಟ್ಟ ಕಟ್ಟಡದ ಮಾಲೀಕರಿಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಉಡುಪಿ ವರದಿ:ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಇಲ್ಲಿನ ಕೃಷ್ಣಮಠದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ.ಪ್ರವಾಸಿಗರು ಹೆಚ್ಚಾಗಿ ತೆರಳುವ ಬೀಚ್ ಹಾಗೂ ದೇವಸ್ತಾನಗಳ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.