ADVERTISEMENT

ಕಸಾಯಿಖಾನೆಗೆ ಗೋವುಗಳ ಸಾಗಣೆ: ಬಜರಂಗದಳದ ಕಾರ್ಯಕರ್ತ ಸೇರಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2018, 6:49 IST
Last Updated 27 ಜುಲೈ 2018, 6:49 IST
ವಶಕ್ಕೆ ಪಡೆಯಲಾದ ಹಸು ಮತ್ತು ಕರು
ವಶಕ್ಕೆ ಪಡೆಯಲಾದ ಹಸು ಮತ್ತು ಕರು   

ಮಂಗಳೂರು: ವಾಹನವೊಂದರಲ್ಲಿ ನಾಲ್ಕು ದನ‌ ಮತ್ತು ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಬಜರಂಗದಳದ ಕಾರ್ಯಕರ್ತ ಸೇರಿದಂತೆ ಇಬ್ಬರನ್ನು ವಿಟ್ಲ ಠಾಣೆ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

ಬಂಟ್ವಾಳ ತಾಲ್ಲೂಕಿನ ವಿಟ್ಲಪಡ್ನೂರು ಗ್ರಾಮದ ಪಡಾರು ನಿವಾಸಿ ಕೃಷ್ಣ ಭಟ್ ಎಂಬುವವರ ಮಗ ಶಶಿಕುಮಾರ್ (48) ಮತ್ತು ಬಂಟ್ವಾಳ ತಾಲ್ಲೂಕು ಕೊಳ್ನಾಡು ಗ್ರಾಮದ ಮಣ್ಣತ್ತಿಲ್ಲ ಕಟ್ಟಗದ್ದೆ ನಿವಾಸಿ ಮೊಹಮ್ಮದ್ ಎಂಬುವವರ ಪುತ್ರ ಅಬ್ದುಲ್ ಹಾರಿಸ್ (21) ಬಂಧಿತರು.

ಖಚಿತ ಮಾಹಿತಿ ಆಧರಿಸಿ ವಿಟ್ಲ ಪಡ್ನೂರು ಗ್ರಾಮದ ಕಡಂಬು ಜಂಕ್ಷನ್ ಬಳಿ ರಾತ್ರಿ 11 ಗಂಟೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ನಾಲ್ಕು ದನ, ಒಂದು ಕರು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

‘ಶಶಿಕುಮಾರ್ ಕೆಲವು ವರ್ಷಗಳಿಂದ ಬಜರಂಗದಳದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾನೆ. ಗೋಸಾಗಣೆ ಮತ್ತು ಗೋಸಾಗಣೆ ವಿರುದ್ಧದ ಪ್ರತಿಭಟನೆಗಳಲ್ಲೂ ಭಾಗವಹಿಸಿದ್ದ ಈತ ಗೋರಕ್ಷಕನಂತೆ ಬಿಂಬಿಸಿಕೊಳ್ಳುತ್ತಿದ್ದ' ಎಂದು ದಕ್ಷಿಣ ಕನ್ನಡ ಎಸ್ಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಅಬ್ದುಲ್ ಹಾರಿಸ್ ವಿರುದ್ಧ ಮಂಗಳೂರಿನ ಅಳಿಕೆಯಲ್ಲಿ ದನ ಕಳವು ಮಾಡಿದ ಆರೋಪದ ಮೇಲೆ ಒಂದು ಪ್ರಕರಣವಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲೂ ಪ್ರಕರಣಗಳಿವೆ. ಆರೋಪಿಗಳು ಜಾನುವಾರುಗಳ ಅಕ್ರಮ ಸಾಗಣೆಗಾಗಿ ಮಹೀಂದ್ರಾ ದೋಸ್ತ್ ವಾಹನದ ಬಾಡಿಯನ್ನು ಎತ್ತರಿಸಿಕೊಂಡಿದ್ದರು. ಆರೋಪಿಗಳಿಂದ ವಶಪಡಿಸಿಕೊಂಡ ಜಾನುವಾರು ಮತ್ತು ವಾಹನದ ಮೌಲ್ಯ ₹ 5 ಲಕ್ಷ ಎಂದು ಮಾಹಿತಿ ನೀಡಿದ್ದಾರೆ.

ಶಶಿಕುಮಾರ್
ಅಬ್ದುಲ್ ಹಾರಿಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.