ADVERTISEMENT

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ರಜತ ಸಂಭ್ರಮ: ಸಾರ್ವಜನಿಕರಿಗೆ ಅಡ್ಡಿ ಆರೋಪ

ಮಂಗಳೂರಿನಲ್ಲಿ ಪ್ರತ್ಯೇಕ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 12:17 IST
Last Updated 23 ಜನವರಿ 2019, 12:17 IST
ಎಸ್‌ಸಿಡಿಸಿಸಿ ಬ್ಯಾಂಕಿನ ರಜತ ಸಂಭ್ರಮ ಅಂಗವಾಗಿ ಮಂಗಳೂರಿನ ಕೆ.ಎಸ್‌. ರಾವ್ ರಸ್ತೆಯಲ್ಲಿ ಸಾಗಿದ ಮೆರವಣಿಗೆಯ ದೃಶ್ಯ. –ಪ್ರಜಾವಾಣಿ ದೃಶ್ಯ
ಎಸ್‌ಸಿಡಿಸಿಸಿ ಬ್ಯಾಂಕಿನ ರಜತ ಸಂಭ್ರಮ ಅಂಗವಾಗಿ ಮಂಗಳೂರಿನ ಕೆ.ಎಸ್‌. ರಾವ್ ರಸ್ತೆಯಲ್ಲಿ ಸಾಗಿದ ಮೆರವಣಿಗೆಯ ದೃಶ್ಯ. –ಪ್ರಜಾವಾಣಿ ದೃಶ್ಯ    

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌ ಅವರ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾರಂಭಕ್ಕಾಗಿ ನಗರದ ಹಲವೆಡೆ ಕಟೌಟ್‌ಗಳನ್ನು ಅಳವಡಿಸಿದ್ದ ಮತ್ತು ಸಾರ್ವಜನಿಕರಿಗೆ ಅಡ್ಡಿಪಡಿಸಿದ ಆರೋಪದಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಮಂಗಳೂರು ದಕ್ಷಿಣ ಮತ್ತು ಪೂರ್ವ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಸಮಾರಂಭದ ಅಂಗವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಜಂಕ್ಷನ್‌ಗಳು, ಜನರು ನಡೆದಾಡುವ ಸ್ಥಳಗಳು ಹಾಗೂ ರಸ್ತೆ ವಿಭಜಕಗಳಿಗೆ ಕಟೌಟ್‌ಗಳನ್ನು ಅಳವಡಿಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡಲಾಗಿದೆ ಎಂದು ದಕ್ಷಿಣ ಠಾಣೆಗೆ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಹನುಮಂತ್ರಾಯ ತಿಳಿಸಿದ್ದಾರೆ.

ಮತ್ತೊಂದೆಡೆ, ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಎಂ.ಮಂಜುನಾಥ ಶೆಟ್ಟಿ ಅವರು ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಪೂರ್ವ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸರ್ಕಾರಿ ಅಧಿಕಾರಿಗಳ ಆದೇಶ ಉಲ್ಲಂಘನೆ (ಭಾರತೀಯ ದಂಡಸಂಹಿತೆಯ ಸೆಕ್ಷನ್ 188), ಅನಧಿಕೃತ ವಾಹನ ನಿಲುಗಡೆ (ಸೆಕ್ಷನ್ 283) ಮತ್ತು ಸಾರ್ವಜನಿಕರಿಗೆ ತೊಂದರೆ (ಸೆಕ್ಷನ್ 290) ವಿಷಯಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ನಿಗದಿಪಡಿಸಿದ ಜಾಗಗಳಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗಿಲ್ಲ. ಬೃಹತ್ ಮೆರವಣಿಗೆ ನಡೆಸಿ ಕಚೇರಿಗೆ ತೆರಳುವವರಿಗೆ, ಶಾಲಾ ಮಕ್ಕಳಿಗೆ ಮತ್ತು ಸ್ಥಳೀಯರಿಗೆ ತೊಂದರೆ ಮಾಡಲಾಗಿದೆ.ಮಹಿಳೆಯರು ಮಕ್ಕಳಿಗೂ ತೊಂದರೆ ಮಾಡಲಾಗಿದೆ ಎಂದು ಎಸಿಪಿ ಅವರು ಸಂಘಟಕರ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಸಮಾರಂಭದಲ್ಲಿ ಭಾಗವಹಿಸಲು ಬರುವವರನ್ನು ನಗರದ ನೆಹರು ಮೈದಾನದ ಬಳಿ ಇಳಿಸಿ ನಂತರ ಬಸ್‌ಗಳನ್ನು ಕೊಟ್ಟಾರದ ಬಳಿ ಇರುವ ಗೋಲ್ಡನ್ ಫೀಂಚ್ ಮೈದಾನದಲ್ಲಿ ನಿಲುಗಡೆ ಮಾಡಬೇಕು. ಸಮಾರಂಭ ಮುಗಿದ ಬಳಿಕ ಜನರನ್ನು ಗೋಲ್ಡನ್ ಫೀಂಚ್ ಮೈದಾನದ ಬಳಿ ಕರೆದೊಯ್ಯಲು ಶಟಲ್ ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಸಂಘಟಕರಿಗೆ ಸೂಚಿಸಲಾಗಿತ್ತು. ಆದರೆ, ಈ ವ್ಯವಸ್ಥೆಗಳನ್ನು ಮಾಡದೆ ನಗರದಾದ್ಯಂತ ಒಟ್ಟಾರೆಯಾಗಿ ಬಸ್‌ಗಳನ್ನು ನಿಲ್ಲಿಸಲಾಗಿದ್ದು, ಸಂಚಾರ ದಟ್ಟಣೆಗೆ ಕಾರಣವಾಗಿತ್ತು’ ಎಂದು ಪೊಲೀಸರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.