ಹುಬ್ಬಳ್ಳಿ: ಹಿಂದೂಸ್ತಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಮೊಮ್ಮಗ, ವಕೀಲ ಮನೋಜ್ ಹಾನಗಲ್(54) ಮಂಗಳವಾರ ರಾತ್ರಿ 11ಕ್ಕೆ ಹೃದಯಾಘಾತದಿಂದ ನಿಧನರಾದರು.
ಶುಗರ್ ಪ್ರಮಾಣ ಹೆಚ್ಚಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಬೆಳಿಗ್ಗೆ 9.30ರ ಸುಮಾರಿಗೆ ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸುಚಿರಾಯು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ತಂದೆ ಬಾಬುರಾವ್ ಹಾನಗಲ್, ತಾಯಿ ಲಲಿತಾ ಹಾನಗಲ್, ಸಹೋದರ ಹಾಗೂ ಇಬ್ಬರು ಸಹೋದರಿಯರು ಇದ್ದಾರೆ.ಡಾ.ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಷನ್ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ನಗರದಲ್ಲಿ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದರು. ಸಂಗೀತ ಕ್ಷೇತ್ರದ ಹಲವು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದ್ದರು.
ಜೆ.ಜಿ. ಕಾಮರ್ಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ, ಸಕ್ರಿ ಲಾ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ವಕೀಲ
ರಾಗಿಯೂ ಪ್ರ್ಯಾಕ್ಟೀಸ್ ಮಾಡಿದ್ದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಅವರು, ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ನಲ್ಲಿ ಸಕ್ರಿಯರಾಗಿದ್ದರು. ಈದ್ಗಾ ಮೈದಾನ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
2005 ರಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ವಸ್ತು ಸಂಗ್ರಹಾಲಯ ಆರಂಭಿಸಿದ್ದರು. ಹಲವಾರು ಸಂಘ–ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿದ್ದವು. ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ಬುಧವಾರ (ಮೇ 15) ಸಂಜೆ 4ಕ್ಕೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.