ಬೆಂಗಳೂರು: ಸರಣಿಯೋಪಾದಿಯಲ್ಲಿ ಹೊರ ಬರುತ್ತಿರುವ ಹಗರಣ ಆರೋಪಗಳು ವಿಧಾನಮಂಡಲದ ಮುಂಗಾರು ಅಧಿವೇಶನದ ಹೊಸ್ತಿಲಲ್ಲೇ ವಿರೋಧ ಪಕ್ಷಗಳ ಕೈಗೆ ಬಲವಾದ ಅಸ್ತ್ರಗಳನ್ನು ಒದಗಿಸಿವೆ. ಸೋಮವಾರದಿಂದ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಹಗರಣಗಳ ಅಸ್ತ್ರವನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಅಣಿಯಾಗಿವೆ. ಪ್ರತ್ಯಸ್ತ್ರಗಳೊಂದಿಗೆ ಸರ್ಕಾರವೂ ಸಿದ್ಧವಾಗುತ್ತಿದೆ. ಈ ಜಟಾಪಟಿಯಲ್ಲಿ ಕಲಾಪವು ‘ಕದನ ಕಣ’ದಂತಾಗುವ ಲಕ್ಷಣಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 14 ತಿಂಗಳು ಪೂರೈಸಿದೆ. ಈವರೆಗಿನ ನಾಲ್ಕು ಅಧಿವೇಶನಗಳಿಗೆ ಹೋಲಿಸಿದರೆ ಈ ಬಾರಿ ವಿರೋಧ ಪಕ್ಷಗಳು ಗಟ್ಟಿ ದನಿಯಲ್ಲಿ ಗರ್ಜಿಸುವ ಸಂಭವವಿದೆ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬಲವಾಗಿ ಒಗ್ಗೂಡಿದ್ದು, ಜಂಟಿ ಹೋರಾಟದಲ್ಲಿ ಸರ್ಕಾರವನ್ನು ಮಣಿಸುವ ಹುರುಪಿನಲ್ಲಿವೆ.
ಒಟ್ಟು ಒಂಬತ್ತು ದಿನ ವಿಧಾನ ಮಂಡಲದ ಕಲಾಪ ನಡೆಯಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪ, ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದು, ವರ್ಗಾವಣೆ ದಂಧೆಯ ಆರೋಪ, ಡೆಂಗಿ ನಿರ್ವಹಣೆಯಲ್ಲಿ ವೈಫಲ್ಯ, ರೈತರ ಆತ್ಮಹತ್ಯೆ, ರಾಜ್ಯ ಸರ್ಕಾರದ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗೆ ಪಟ್ಟು ಹಿಡಿಯಲು ವಿರೋಧ ಪಕ್ಷಗಳು ತಯಾರಿ ಮಾಡಿಕೊಂಡಿವೆ.
ವಾಲ್ಮೀಕಿ ನಿಗಮದ ಸದ್ದು: ಲೋಕಸಭಾ ಚುನಾವಣೆಯ ಬೆನ್ನಲ್ಲೇ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ₹94 ಕೋಟಿ ಅಕ್ರಮವಾಗಿ ವರ್ಗಾವಣೆಯಾಗಿರುವ ಹಗರಣ ಹೊರಬಂದಿತ್ತು.
ಈ ಪ್ರಕರಣ ಆರಂಭದ ದಿನದಿಂದಲೇ ವಿಧಾನಮಂಡಲದಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ. ಹಗರಣದ ಹಣ ಲೋಕಸಭಾ ಚುನಾವಣೆಗೆ ಬಳಕೆಯಾಗಿದೆ ಎಂಬ ಆರೋಪವನ್ನೇ ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಲು ಬಿಜೆಪಿ, ಜೆಡಿಎಸ್ ವಿಧಾನಮಂಡಲದೊಳಗೆ ಹೋರಾಟಕ್ಕೆ ಸಜ್ಜಾಗಿವೆ.
ಹಗರಣದ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರವಷ್ಟೆ ಬಂಧಿಸಿದೆ. ನಿಗಮದ ಅಧ್ಯಕ್ಷರೂ ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ತಲೆಮರೆಸಿಕೊಂಡಿದ್ದಾರೆ. ಅಧಿವೇಶನದ ಸನಿಹದಲ್ಲೇ ನಡೆದಿರುವ ಈ ಬೆಳವಣಿಗೆಗಳ ಕುರಿತು ನಿಲುವಳಿ ಸೂಚನೆ ಮಂಡನೆಗೆ ವಿರೋಧ ಪಕ್ಷಗಳು ಮೊದಲ ದಿನವೇ ಅವಕಾಶ ಕೋರುವ ಸಾಧ್ಯತೆ ಇದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಷಯದಲ್ಲಿ ಬಿಜೆಪಿ, ಜೆಡಿಎಸ್ ಅಧಿಕಾರದಲ್ಲಿದ್ದಾಗ ನಡೆದಿದ್ದ ಇಂತಹ ಪ್ರಕರಣಗಳನ್ನು ಪ್ರಸ್ತಾಪಿಸಿ ತಿರುಗೇಟು ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಕೆಲವು ನಿಗಮ, ಮಂಡಳಿಗಳಲ್ಲಿ ಹಾಗೂ ಇಲಾಖೆಗಳಲ್ಲಿ ನಡೆದಿದ್ದ ಇಂತಹದ್ದೇ ಹಗರಣಗಳ ದಾಖಲೆ ಸಂಗ್ರಹಕ್ಕೆ ಸೂಚನೆ ನೀಡಿದೆ.
ಸಿ.ಎಂ ವಿರುದ್ಧವೇ ದಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧದ ಭೂ ಹಗರಣದ ಆರೋಪವು ವಿರೋಧ ಪಕ್ಷಗಳ ಕೈಯನ್ನು ಬಲಪಡಿಸಿದಂತಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಲ್ಲಿ ಪರಿಹಾರ ರೂಪದಲ್ಲಿ 14 ನಿವೇಶನಗಳನ್ನು ಹಂಚಿಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ಈ ಅಧಿವೇಶನದಲ್ಲಿ ಪ್ರಬಲವಾದ ದಾಳವಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ವಿಪಕ್ಷಗಳ ಮೈತ್ರಿಕೂಟ ಈ ದಿಸೆಯಲ್ಲಿ ಬಲವಾಗಿಯೇ ತಾಲೀಮು ನಡೆಸಿವೆ.
ಸಿದ್ದರಾಮಯ್ಯ ಈ ಬಾರಿ ನೇರವಾಗಿ ಭೂಹಗರಣದ ಆರೋಪಕ್ಕೆ ಸಿಲುಕಿದ್ದಾರೆ. ಅಧಿಸೂಚನೆಯಿಂದ ಕೈಬಿಟ್ಟ ಜಮೀನನ್ನು ಮುಖ್ಯಮಂತ್ರಿ ಕುಟುಂಬದವರೇ ಖರೀದಿಸಿ, ಪುನಃ ಮುಡಾಕ್ಕೆ ನೀಡಿ ಪರಿಹಾರ ಪಡೆದ ನೇರ ಆರೋಪ ಇರುವುದರಿಂದ ಸರ್ಕಾರ ಈ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ. ವಿರೋಧ ಪಕ್ಷಗಳ ವಾಗ್ಬಾಣವನ್ನು ತುಂಡರಿಸಲು ಮುಡಾದಲ್ಲಿ ನಡೆದ ಇತರೆ ಅಕ್ರಮಗಳನ್ನು ಗುರಾಣಿಯಾಗಿ ಬಳಸಲು ಸರ್ಕಾರ ಸಿದ್ಧತೆ ನಡೆಸಿದೆ. ‘ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಮುಡಾದಲ್ಲಿ 48 ನಿವೇಶನ ಹಂಚಿಕೆಯಾಗಿದೆ’ ಎಂಬ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರ ಹೇಳಿಕೆ ಈ ಕಾರ್ಯತಂತ್ರದ ಭಾಗವಾಗಿ ಇದ್ದಂತಿದೆ.
ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು
ಹಿಂದಿನ ಅಧಿವೇಶನಗಳಿಗಿಂತ ಈ ಬಾರಿ ಬಿಜೆಪಿ–ಜೆಡಿಎಸ್ ಒಗ್ಗಟ್ಟು ಬಲವಾಗಿದೆ. ಜೆಡಿಎಸ್ ಈಗ ಅಧಿಕೃತವಾಗಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವುದರಿಂದ ಬಿಜೆಪಿ ಜತೆ ಸೇರಿ ಸರ್ಕಾರದ ವಿರುದ್ಧ ಬಲವಾಗಿಯೇ ಹೋರಾಟಕ್ಕೆ ಇಳಿಯುವ ನಿರೀಕ್ಷೆ ಇದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಕೆಲವು ದಿನಗಳಿಂದ ಜೋರು ದನಿಯಲ್ಲೇ ಸರ್ಕಾರದ ವಿರುದ್ಧ ವಾಗ್ದಾಳಿಗೆ ಇಳಿದಿದ್ದಾರೆ. ಈ ಬಾರಿ ಸರ್ಕಾರದ ವಿರುದ್ಧ ಸಿಕ್ಕಿರುವ ಹಗರಣಗಳ ‘ಅಸ್ತ್ರ’ವನ್ನು ಜೋರಾಗಿಯೇ ಬಳಸಿಕೊಳ್ಳುವ ಸಾಧ್ಯತೆ ಇದೆ.
‘ಕೈ’ಗೆ ಶಾಸಕರ ಮುನಿಸಿನದ್ದೇ ಸಮಸ್ಯೆ
ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಹಲವು ಶಾಸಕರು ಸಚಿವರ ವಿರುದ್ಧ ಮುನಿಸಿಕೊಂಡಿದ್ದಾರೆ. ಅನುದಾನ ಹಂಚಿಕೆ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಚಿವರು ತಮ್ಮದೇ ಪಕ್ಷದ ಶಾಸಕರ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ದೂರುಗಳಿವೆ. ಸಚಿವರು ತಮಗೆ ಗೌರವ ಕೊಡುತ್ತಿಲ್ಲ ಎಂಬ ಸಿಟ್ಟೂ ಕಾಂಗ್ರೆಸ್ ಶಾಸಕರಲ್ಲಿದೆ.
ಸಚಿವರ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು, ವಿಧಾನಮಂಡಲ ದೊಳಗೆ ಪ್ರತಿಪಕ್ಷಗಳನ್ನು ಪ್ರಬಲವಾಗಿ ಎದುರಿಸದೇ ಅಸಹಕಾರ ಧೋರಣೆ ತಳೆದರೆ ಕಷ್ಟವಾಗಬಹುದು ಎಂಬ ಚಿಂತೆ ಕಾಂಗ್ರೆಸ್ ನಾಯಕರಲ್ಲಿದೆ. ಅಧಿವೇಶನದ ಹೊತ್ತಿನಲ್ಲೇ ಶಾಸಕರ ಮುನಿಸು ತಣಿಸುವ ಕೆಲಸವೂ ಆರಂಭವಾಗಿದೆ ಎನ್ನುತ್ತವೆ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.