ADVERTISEMENT

ಐಎಂಎ ಹಗರಣ| ಖತ್ರಿ ಹೆಸರು ಹೇಳಿದ ಮನ್ಸೂರ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:15 IST
Last Updated 16 ಸೆಪ್ಟೆಂಬರ್ 2019, 20:15 IST
   

ಬೆಂಗಳೂರು:‘ಐಎಂಎ ಸಮೂಹ ಕಂಪನಿಗೆ ನಿರಾಕ್ಷೇಪಣಾಪತ್ರ (ಎನ್‌ಒಸಿ) ಪಡೆಯಲು ಐಎಎಸ್‌ ಅಧಿಕಾರಿ ರಾಜ್‌ಕುಮಾರ್‌ ಖತ್ರಿ ಅವರಿಗೆ ₹10 ಕೋಟಿ ನೀಡಲಾಗಿತ್ತು’ ಎಂದು ಬಹು ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

ಐಎಂಎ→ವಂಚನೆ ಪ್ರಕರಣದ ತನಿಖೆ ನಡೆಸಿದ್ದ ರಾಜ್ಯದ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಮನ್ಸೂರ್‌ ‌ ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾವಿರಾರು ಷೇರುದಾರರಿಂದ ಕೋಟ್ಯಂತರ ರೂಪಾಯಿ ದೋಚಿರುವ ಐಎಂಎ ಸಮೂಹ ಕಂಪನಿಗೆ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಬಿ.ಎಂ. ವಿಜಯ ಶಂಕರ್‌, ಬೆಂಗಳೂರು ಉತ್ತರ ವಲಯದ ಉಪ ವಿಭಾಗಾಧಿಕಾರಿ ಎಲ್‌.ಸಿ ನಾಗರಾಜ್‌ ನೀಡಿದ್ದ ಕ್ಲೀನ್‌ ಚಿಟ್‌ ಮೇಲೆ ಖತ್ರಿ ಅವರಿಂದ ಎನ್‌ಒಸಿ ಪಡೆಯಲು ಖಾನ್‌ ಪ್ರಯತ್ನಿಸಿದ್ದರು. ಅದು ಸಿಕ್ಕಿದ್ದರೆ ಸಾಲ ಪಡೆಯಲು ಕಂಪ‍ನಿಗೆ ಅನುಕೂಲ ಆಗುತಿತ್ತು ಎನ್ನಲಾಗಿದೆ.

ADVERTISEMENT

‘ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿದ್ದ ಖತ್ರಿ (ಈಗ ಉನ್ನತ ಶಿಕ್ಷಣ ಇಲಾಖೆ ಎಸಿಎಸ್‌) ಅವರನ್ನು ಮುಜಾಹಿದ್ದೀನ್ ಎಂಬುವರು ಸಂಪರ್ಕಿಸಿದ್ದರು. ಅವರ ಮೂಲಕವೇ ಹಿರಿಯ ಅಧಿಕಾರಿಗೆ ಹಣ ನೀಡಲಾಗಿತ್ತು. ಆದರೆ, ಅವರು ಇನ್ನೂ ಹೆಚ್ಚಿನ ಹಣ ಕೊಡುವಂತೆ ಒತ್ತಾಯಿಸಿದ್ದರು’ ಎಂದು ಮನ್ಸೂರ್‌ ಖಾನ್‌ ಹೇಳಿದ್ದಾರೆ.

ಪ್ರಮುಖ ಆರೋಪಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆನಂತರ, ಮುಜಾಹಿದ್ದೀನ್‌ ಅವರನ್ನು ವಿಚಾರಣೆಗೆ ಒಳಪಡಿಸಿದ ಎಸ್‌ಐಟಿ ಹೇಳಿಕೆ ಪಡೆದಿದೆ. ಮನ್ಸೂರ್‌ ಹೇಳಿಕೆಯನ್ನು ಮುಜಾಹಿದ್ದೀನ್‌ ಅಲ್ಲಗೆಳೆದಿದ್ದಾರೆ. ಈ ಸಂಬಂಧ ರಾಜ್‌ಕುಮಾರ್‌ ಖತ್ರಿ ಅವರ ವಿಚಾರಣೆ ನಡೆಸಲಾಗಿದ್ದು, ಅವರೂ ಆರೋಪ ನಿರಾಕರಿಸಿದ್ದಾರೆ.

‘ಇಡೀ ಸಂದರ್ಭ ಗಮನಿಸಿದರೆ ಖತ್ರಿ ಹಣ ತೆಗೆದುಕೊಂಡಂತೆ ಕಾಣುವುದಿಲ್ಲ. ಈ ಬಗ್ಗೆ ಖಾನ್‌ ಸುಳ್ಳು ಹೇಳುತ್ತಿರುವಂತೆ ಕಾಣುತ್ತಿದೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದು ಕುತೂಹಲದ ಸಂಗತಿ ಎಂರರೆ ಬಿಡಿಎ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ಪಿ.ಡಿ ಕುಮಾರ್‌ ಅವರೂ ರಾಜ್‌ಕುಮಾರ್‌ ಅವರಿಂದ ಎನ್‌ಒಸಿ ಕೊಡಿಸುವುದಾಗಿ ಐಎಂಎ ಕಡೆಯಿಂದ ₹ 5 ಕೋಟಿ ಪಡೆದ ಆರೋಪಕ್ಕೆ ಒಳಗಾಗಿದ್ದಾರೆ. ಆದರೆ, aವರೂ ಖತ್ರಿ aವರಿಗೆ ಹಣ ಕೊಟ್ಟಿಲ್ಲ ಎಂದೂ ಎಸ್‌ಐಟಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

***

ಮನ್ಸೂರ್‌ ಖಾನ್‌ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ನಾನು ಕಾನೂನಿನ ಪ್ರಕಾರ ಕೆಲಸ ಮಾಡಿದ್ದೇನೆ. ಈ ಬಗ್ಗೆ ಹೆಚ್ಚೇನೂ ಹೇಳಲಾರೆ.

– ರಾಜ್‌ಕುಮಾರ್‌ ಖತ್ರಿ, ಐಎಎಸ್‌ ಅಧಿಕಾರಿ

***

ಐಎಂಎ ವಿರುದ್ಧ ಇ.ಡಿ ಚಾರ್ಜ್‌ಶೀಟ್‌

ಐಎಂಎ ವಂಚನೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಇಲ್ಲಿನ ನ್ಯಾಯಾಲಯದಲ್ಲಿ ಸೋಮವಾರ 6000 ಪುಟಗಳ ದೋಷಾರೋಪ ಪಟ್ಟಿ ದಾಖಲಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್‌ ಸೇರಿದಂತೆ 21 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೋಷಾರೋಪ ಪಟ್ಟಿ ಒಳಗೊಂಡಿದೆ. ಇದುವರೆಗೆ ಇ.ಡಿ ಖಾನ್‌ ಅವರಿಗೆ ಸೇರಿದ ₹ 210 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ. ಕಳೆದ ವಾರ ಸಿಬಿಐ ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.