ADVERTISEMENT

ರಮೇಶ ಜಾರಕಿಹೊಳಿ ವಿರುದ್ಧ ಬಿಜೆಪಿ ಶಾಸಕರಿಂದ ಹೈಕಮಾಂಡ್‌ಗೆ ದೂರು?

ಜಿಲ್ಲೆಯ ಬಿಜೆಪಿ ನಾಯಕರಲ್ಲಿ ನಡೆದಿದೆ ಶೀತಲ ಸಮರ‌ | ನಾಯಕತ್ವ ಬದಲಾವಣೆಗೆ ಇನ್ನಿಲ್ಲದ ಒತ್ತಡ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 13:26 IST
Last Updated 7 ಆಗಸ್ಟ್ 2023, 13:26 IST
   

ಬೆಳಗಾವಿ: ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧ ಬಿಜೆಪಿಯ ಕೆಲವು ಮುಖಂಡರು ಹಾಗೂ ಶಾಸಕರೇ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂಬ ಸುದ್ದಿ ಪಕ್ಷದಲ್ಲಿ ಹರಿದಾಡುತ್ತಿದೆ.

ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳು ಈ ವಿಚಾರ ಕೇಳಿದಾಗ ಮುಖಂಡರು ಮೌನಕ್ಕೆ ಜಾರಿದರು. ಸುದ್ದಿಯನ್ನು ತಳ್ಳಿಯೂ ಹಾಕಲಿಲ್ಲ, ಬಹಿರಂಗವಾಗಿ ಒಪ್ಪಿಕೊಳ್ಳಲೂ ಇಲ್ಲ.

‘ರಮೇಶ ಜಾರಕಿಹೊಳಿ ಅವರ ನಾಯಕತ್ವವನ್ನು ಮುಂದೆಯೂ ಒಪ್ಪಿಕೊಳ್ಳುತ್ತೀರಾ’ ಎಂಬ ಪ್ರಶ್ನೆಗೆ ಶಾಸಕರಾದ ಶಶಿಕಲಾ ಜೊಲ್ಲೆ, ಅಭಯ ‍‍ಪಾಟೀಲ, ಮುಖಂಡರಾದ ಮಹಾಂತೇಶ ಕವಟಗಿಮಠ, ಉಜ್ವಲಾ ಬಡವನಾಚೆ ಮುಂತಾದವರು ನಕ್ಕು ಸುಮ್ಮನಾದರು.

ADVERTISEMENT

‘ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಖುದ್ದಾಗಿ ಮುಂದೆ ಬಂದು ನಾಯಕತ್ವ ವಹಿಸಿಕೊಂಡರು. ಅವರ ಧೋರಣೆ ಜಿಲ್ಲೆಯ ಇತರ ನಾಯಕರು ಹಾಗೂ ಒಂದು ದೊಡ್ಡ ಸಮುದಾಯದ ಮುಖಂಡರಿಗೆ ಇಷ್ಟವಾಗಲಿಲ್ಲ. ಕಾರ್ಯಕರ್ತರಲ್ಲೂ ಗೊಂದಲಗಳು ಮೂಡಿದವು. ಹೀಗಾಗಿ, ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿಗೆ ಸೋಲಾಗಿದೆ. 13ರಷ್ಟಿದ್ದ ಬಿಜೆಪಿ ಶಾಸಕರ ಸಂಖ್ಯೆ ಈಗ 7ಕ್ಕೆ ಇಳಿದಿದೆ’ ಎಂದೂ ದೂರಿನಲ್ಲಿ ಹೇಳಲಾಗಿದೆ ಎನ್ನುತ್ತವೆ ಪಕ್ಷದ ಮೂಲಗಳು.

‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರೇ ನಾಯಕತ್ವ ವಹಿಸಿಕೊಳ್ಳುವ ಇರಾದೆ ಇದೆ. ಇದಕ್ಕೆ ಅವಕಾಶ ನೀಡಬಾರದು ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟ ಬಿಜೆಪಿಯಲ್ಲಿ, ರಮೇಶ ಜಾರಕಿಹೊಳಿ ಏಕಮಾತ್ರ ನಾಯಕ ಎಂಬಂತೆ ಬಿಂಬಿಸಿಕೊಂಡರು. ಇದನ್ನು ಕಾರ್ಯಕರ್ತರು ಒಪ್ಪಿಕೊಳ್ಳಲಿಲ್ಲ. ಮುಂದೆಯೂ ಲೋಕಸಭೆ ಚುನಾವಣೆ ಕಾಲಕ್ಕೆ ಇದೇ ರೀತಿಯ ಭಾವನೆ ಮೂಡಬಾರದು’ ಎಂದು ಕೆಲವರು ಹೈಕಮಾಂಡ್‌ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ, ಅಥಣಿ, ಕಾಗವಾಡ, ಯಮಕನಮರಡಿ, ರಾಮದುರ್ಗ ಕ್ಷೇತ್ರಗಳಲ್ಲಿ ರಮೇಶ ಜಾರಕಿಹೊಳಿ ತಮ್ಮ ಬೆಂಬಲಿಗರನ್ನೇ ಕಣಕ್ಕಿಳಿಸಿದರು. ಅವರು ಟಿಕೆಟ್‌ ಕೊಡಿಸಿದ ಯಾವ ಅಭ್ಯರ್ಥಿಯೂ ಗೆಲ್ಲಲಿಲ್ಲ. ಅಲ್ಲದೇ, ಉಳಿದ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳಿಗೇ ಅಡ್ಡಗಾಲು ಹಾಕಿದರು’ ಎಂದು ಸೋಲುಂಡವರು ದೂರಿದ್ದಾಗಿ ಹೆಸರು ಹೇಳಲಿಚ್ಚಿಸದ ಮುಖಂಡರು ತಿಳಿಸಿದರು.

‘ಜಿಲ್ಲೆಯಲ್ಲಿ ಪಕ್ಷದ ನಾಯಕತ್ವ ಯಾರ ಹೆಗಲಿಗೆ ಬೀಳಲಿದೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೊಲ್ಲೆ, ‘ನಾವು ಮೋದಿ ಅವರ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಹೈಕಮಾಂಡ್‌ ಯಾರಿಗೆ ಜವಾಬ್ದಾರಿ ಕೊಡುತ್ತದೆಯೋ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ’ ಎಂದರು.

‘ಈ ಬಾರಿ ಲೋಕಸಭೆಗೆ ಸ್ಪರ್ಧೆಸುವ ಇಚ್ಚೆ ಇದೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಾಂತೇಶ ಕವಟಗಿಮಠ, ‘ಅವಕಾಶ ಕೊಟ್ಟರೆ ಖಂಡಿತ ಸ್ಪರ್ಧಿಸುತ್ತೇನೆ. ಟಿಕೆಟ್‌ ಸಿಗದಿದ್ದರೆ ಯಾರಿಗೆ ಕೊಡುತ್ತಾರೋ ಅವರೊಂದಿಗೆ ಇರುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.